ಸೆ.29ರಂದು ಪಡುಬಿದ್ರಿ ಬಂಟರ ಸಂಘದಲ್ಲಿ ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ ಅವರಿಗೆ ‘ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ ಪ್ರದಾನ’

ಉಡುಪಿ: ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಪಡುಬಿದ್ರಿ ಇವರ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ ‘ಸಿರಿಮುಡಿ ದತ್ತಿನಿಧಿ ಟ್ರಸ್ಟ್’ ಬಂಟರ ಸಂಘ ಪಡುಬಿದ್ರಿ ಇದರ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ ಅವರಿಗೆ ‘ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಇದೇ ಸೆ.29ರಂದು ಪಡುಬಿದ್ರಿ ಬಂಟರ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಪಡುಬಿದ್ರಿ ಬಂಟರ ಸಂಘದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಬಂಟರ ಭವನದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಡಾ. ಕೆ. ಪ್ರಕಾಶ್ ಶೆಟ್ಟಿ ದಂಪತಿ ಹಾಗೂ ಇತರ ಅತಿಥಿಗಣ್ಯರನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಗುವುದು. ಬೆಳಿಗ್ಗೆ 10ಗಂಟೆಯಿಂದ ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಲಿದೆ ಎಂದರು.

ಬೆಳಿಗ್ಗೆ 10.30ಕ್ಕೆ ಆರಂಭಗೊಳ್ಳುವ ಸಭಾ ಕಾರ್ಯಕ್ರಮವನ್ನು ಬಂಟ್ಸ್ ಸಂಘ ಬೆಂಗಳೂರು ಇದರ ಅಧ್ಯಕ್ಷ ಸಿ.ಎ. ಅಶೋಕ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬೈ ಪೆನಿನ್ಸುಲಾ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ಕರುಣಾಕರ ಆರ್. ಶೆಟ್ಟಿ, ಬಂಟ್ಸ್ ಸಂಘ ಪಿಂಪ್ರಿ ಚಿಂಚಿವಾಡ ಪುಣೆ ಇದರ ಮಾಜಿ ಅಧ್ಯಕ್ಷ ಎರ್ಮಾಳು ಸೀತಾರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಪಡುಬಿದ್ರಿ ಬಂಟರ ಸಂಘದ ವತಿಯಿಂದ ಆಯೋಜಿಸಲು ಉದ್ದೇಶಿಸಿರುವ ಅಂತರ್ ರಾಜ್ಯ ಬಂಟರ ಕ್ರೀಡಾಕೂಟ ಇದರ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಂಟ್ಸ್ ವೆಲೈರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳ್ ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕಧ್ಯಕ್ಷರಾದ ಸಾಂತೂರು ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷರಾದ ಶ್ರೀನಾಥ್ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ, ಯುವ ವಿಭಾಗದ ಅಧ್ಯಕ್ಷೆ ನವೀನ್ ಎನ್. ಶೆಟ್ಟಿ ಹಾಗೂ ಸಾಂಸ್ಕೃತಿಕ ವಿಭಾಗದ ಸಂಚಾಲಕ ಜಯ ಶೆಟ್ಟಿ ಉಪಸ್ಥಿತರಿದ್ದರು.