ಬೆಂಗಳೂರು: ತಿರುಪತಿ ಲಡ್ಡು ವಿವಾದದ ಬಳಿಕ ಕೆಎಂಎಫ್ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ. ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತಿರುಮಲಕ್ಕೆ ಕಳುಹಿಸುವ ತುಪ್ಪದ ಟ್ಯಾಂಕರ್ಗಳಿಗೆ ಜಿಪಿಎಸ್, ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಲು ಮುಂದಾಗಿದೆ.
ಈ ಹಿಂದೆ ವಾರಕ್ಕೆ ಮೂರು ಟ್ಯಾಂಕರ್ಗಳನ್ನ ಆಮದು ಮಾಡಿಕೊಳ್ಳಲಾಗುತ್ತಿತ್ತು. ಒಟ್ಟಾರೆ 3 ತಿಂಗಳಿಗೆ 350 ಟನ್ ತುಪ್ಪ ನೀಡುವಂತೆ ಕೆಎಂಎಫ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹಿಂದೆ ಟಿಟಿಡಿ ಮಾಡಿಕೊಂಡ ಒಪ್ಪಂದ ಇನ್ನೂ ಒಂದೂವರೆ ತಿಂಗಳಲ್ಲಿ ಮುಕ್ತಾಯವಾಗಲಿದೆ. ಹಾಗಾಗಿ ಪ್ರತಿನಿತ್ಯ ಒಂದೊಂದು ಟ್ಯಾಂಕರ್ ತುಪ್ಪ ತರಿಸಿಕೊಳ್ಳಲು 6 ತಿಂಗಳ ಒಪ್ಪಂದ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.












