ಉಡುಪಿ: ಅಪರಾಧ ನಡೆಯುವ ಸ್ಥಳದಲ್ಲಿನ ಕಳಪೆ ಸಾಕ್ಷ್ಯ ಸಂಗ್ರಹದಿಂದಾಗಿ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆದುದರಿಂದ ಆರೋಪಿಗಳಿಗೆ ಶಿಕ್ಷೆಯಾಗಲು ವೈಜ್ಞಾನಿಕ ಸಾಕ್ಷ್ಯಗಳು ಅತೀ ಅಗತ್ಯ. ಆದುದರಿಂದ ಪೊಲೀಸ್ ಅಧಿಕಾರಿಗಳು ಈ ಕುರಿತ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಮಣಿಪಾಲ ಕೆಎಂಸಿಯ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ ಸೆಂಟರ್ ಸಹಯೋಗದಲ್ಲಿ ಮಣಿಪಾಲ ಕೆಎಂಸಿಯ ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆದ ಪಶ್ಚಿಮ ವಲಯ ಮಟ್ಟದ ಆರನೇ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪ್ರಸ್ತುತ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಬದಲಾವಣೆಯಾಗಿವೆ. ಆದುದರಿಂದ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ ಪೊಲೀಸರು ವೈಜ್ಞಾನಿಕ ಹಾಗೂ ವೃತ್ತಿಪರ ತನಿಖೆಗಳಿಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ ಎಂದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಮಾತನಾಡಿ, ಈ ಕೂಟ ಕೇವಲ ಸ್ಪರ್ಧೆಗೆ ಮಾತ್ರ ಸೀಮಿತ ಅಲ್ಲ. ಇಲ್ಲಿಂದ ಸಾಕಷ್ಟು ವಿಚಾರ ಗಳನ್ನು ಕಲಿಯಬಹುದಾಗಿದೆ. ಮುಂದಿನ ಸ್ಪರ್ಧೆಯಲ್ಲಿ ಹೊಸ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಬೇಕು. ಇದರಿಂದ ಎಲ್ಲರೂ ಕೂಡ ಜ್ಞಾನವನ್ನು ಗಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಹೆ ಚೀಫ್ ಆಪರೇಷನ್ ಆಫೀಸರ್ ಡಾ.ರವಿರಾಜ್ ಎನ್.ಎಸ್., ಮಂಗಳೂರು ವಲಯ ಅಭಿಯೋಜನೆ ಇಲಾಖೆಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಿ.ಎ. ಹೆಗಡೆ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ ಸ್ವಾಗತಿಸಿದರು. ಮಂಗಳೂರು ಪಶ್ಚಿಮ ವಲಯ ಬೆರಳಚ್ಚು ವಿಭಾಗದ ಡಿವೈಎಸ್ಪಿ ಗಿರೀಶ್ ವಂದಿಸಿದರು. ಪೊಲೀಸ್ ಸಿಬ್ಬಂದಿ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಜಿಲ್ಲೆಗೆ ಸಮಗ್ರ ಪ್ರಶಸ್ತಿ:
ಕೂಟದಲ್ಲಿ ಮಂಗಳೂರು ಪಶ್ಚಿಮ ವಲಯ ವ್ಯಾಪ್ತಿಯ ಉಡುಪಿ, ದ.ಕ. ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳು ಭಾಗವಹಿಸಿದ್ದವು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಅತೀ ಹೆಚ್ಚು ಅಂಕ ಗಳಿಸಿದ ಉಡುಪಿ ಜಿಲ್ಲೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.