ಧಾರ್ಮಿಕ ಕೇಂದ್ರದಿಂದ ಶಾಸಕ ಸುನಿಲ್ ಕುಮಾರ್ ರನ್ನು ಬಹಿಷ್ಕರಿಸಿ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ವಾಗ್ದಾಳಿ

ಉಡುಪಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ ತಾನು ಮಾಡಿದ ಅವ್ಯವಹಾರ, ಬೇನಾಮಿ ದುಡ್ಡು, ಕರ್ಮಕಾಂಡ ಇವೆಲ್ಲವನ್ನೂ ಉಳಿಸಲು ಧರ್ಮವನ್ನು ಎದುರು ತಂದು ಜನರನ್ನು ಮೋಸ ಮಾಡುತ್ತಿದ್ದಾರೆ.

ಜಗತ್ತಿನಲ್ಲೇ ಇಷ್ಟೊಂದು ಧರ್ಮಕ್ಕೆ ಅಪಪ್ರಚಾರ ಮಾಡಿದವರು ಯಾರು ಇಲ್ಲ. ಇವರನ್ನು ಧಾರ್ಮಿಕ ಕೇಂದ್ರದೊಳಗೆ ಬಿಡಬಾರದು. ಧಾರ್ಮಿಕ ಕೇಂದ್ರದಿಂದ ಬಹಿಷ್ಕಾರ ಹಾಕಬೇಕು. ಇವರು ಧಾರ್ಮಿಕ ಕೇಂದ್ರದೊಳಗೆ ಹೋಗಲು ಅನರ್ಹರು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಕಾಲು ಕೋಟಿಯಲ್ಲಿ ಕಂಚಿನ ಮೂರ್ತಿ ನಿರ್ಮಿಸಬೇಕಿತ್ತು. ಆದರೆ ಶಿಲ್ಪಿ ಕೃಷ್ಣ ನಾಯ್ಕ್ ಅನ್ಯ ವಸ್ತುವಿನಿಂದ ಮೂರ್ತಿ ನಿರ್ಮಿಸಿ ಇಡೀ ಜಗತ್ತಿಗೆ ಮೋಸ ಮಾಡಿದ್ದಾರೆ. ಹಾಗಾಗಿ ಇನ್ಮುಂದೆ ಅವರ ಮೂಲಕ ಮೂರ್ತಿಯ ಕೆಲಸ ಮುಂದುವರಿಸಬಾರದು ಎಂದರು. ಮೂರ್ತಿ‌ಯನ್ನು ಯಾವುದರಲ್ಲಿ ನಿರ್ಮಿಸಬೇಕೆಂಬುವುದನ್ನು ತಜ್ಞರ ಸಮಿತಿ ಆದಷ್ಟು ಬೇಗ ತೀರ್ಮಾನಿಸಬೇಕು. ಶಿಲ್ಪಿ ಕೃಷ್ಣ ನಾಯ್ಕ್ ಅವರಿಂದ ಒಂದು ಕಾಲು ಕೋಟಿ ರೂ. ವಾಪಾಸು ಪಡೆದು, ರಾಜ್ಯದ ಪರಿಣಿತ ಶಿಲ್ಪಿಗಳಿಗೆ ಮೂರ್ತಿ‌ ನಿರ್ಮಿಸಲು ಕೊಡಬೇಕು. ನೂರಾರು ವರ್ಷಗಳ ಕಾಲು ಶಾಶ್ವತವಾಗಿ ಉಳಿಯುವ ಮೂರ್ತಿ ನಿರ್ಮಾಣ ಮಾಡಬೇಕು. ಬೈಲೂರಿನ ಉಮಿಕಲ್ ಬೆಟ್ಟವನ್ನು ಉತ್ತಮ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಎಲ್ಲದಕ್ಕೂ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಯಾವುದೇ ಕೆಲಸ ಮಾಡದಂತಹ ಸ್ಥಿತಿಯನ್ನು ತಂದಿಟ್ಟಿದ್ದಾರೆ. ಇಷ್ಟಿದ್ದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.