ಉಡುಪಿ:ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ಯಶಸ್ವಿಗೊಳಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಜಿಲ್ಲೆಯಲ್ಲಿ ಸೆಪ್ಟಂಬರ್ 15 ರಂದು ಪ್ರಜಾಪ್ರಭುತ್ವದ ದಿನದ ಅಂಗವಾಗಿ 100 ಕಿ.ಮೀ. ಮಾನವ ಸರಪಳಿ ನಿರ್ಮಾಣ ಕಾರ್ಯವನ್ನು ಯಶಸ್ವಿಗೊಳಿಸೋಣ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಗುರುವಾರ ಕಾಪು ತಾಲೂಕಿನ ಕುಂಜಾರುಗಿರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರನ್ನು ಉತ್ತೇಜಿಸಲು ಆಯೋಜಿಸಲಾದ ಟ್ರೆಕ್ಕಿಂಗ್‌ನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ರಾಜ್ಯ ಸರ್ಕಾರವು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಬೀದರ್‌ನಿಂದ ಚಾಮರಾಜ ನಗರದ ವರೆಗೆ 250 ಕಿ.ಮೀ ವರೆಗೆ 25 ಲಕ್ಷ ಜನರು ಮಾನವ ಸರಪಳಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 100 ಕಿ.ಮೀ ಮಾನವ ಸರಪಳಿ ನಿರ್ಮಿಸಲು ಸಾರ್ವಜನಿಕರು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಸಮುದಾಯದ ಮುಖಂಡರುಗಳು, ಎನ್.ಜಿ.ಓ ಗಳು, ಸ್ವ-ಸಹಾಯ ಸಂಘದ ಸದಸ್ಯರುಗಳು, ರೋಟರಿ ಸಂಸ್ಥೆಯ ಸದಸ್ಯರುಗಳು ಸೇರಿದಂತೆ ಪ್ರತಿಯೊಬ್ಬ ನಾಗರಿಕರು ಸ್ವಯಂಪ್ರೇರಿತವಾಗಿ ಕೈಜೋಡಿಸಿ, ಭಾಗವಹಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಮಾನವ ಸರಪಳಿಯು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮೂಲಕ ಬೈಂದೂರು ತಾಲೂಕಿನ ಶಿರೂರು ಗ್ರಾಮದಿಂದ ಮಾನವ ಸರಪಳಿ ಆರಂಭಗೊಂಡು ಬಿಜೂರು, ಉಪ್ಪುಂದ, ಕಾರ್ಗಲ್, ಕಂಬದಕೋಣೆ, ಕಿರಿಮಂಜೇಶ್ವರ, ನಾವುಂದ, ಮರವಂತೆ, ಹೊಸಾಡು, ಹೆಮ್ಮಾಡಿ, ಕಟ್‌ಬೆಲ್ತೂರು, ತಲ್ಲೂರು, ಕೋಟೇಶ್ವರ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ, ಕೋಟ, ಕೋಟತಟ್ಟು, ಸಾಲಿಗ್ರಾಮ, ಪಾಂಡೇಶ್ವರ, ಐರೋಡಿ, ಹಂದಾಡಿ, ವಾರಂಬಳ್ಳಿ, ಚಾಂತಾರು, ಹಾರಾಡಿ, ಉಪ್ಪೂರು, ಅಂಬಲಪಾಡಿ, ಕಡೆಕಾರ್, ಉದ್ಯಾವರ, ಕಟಪಾಡಿ,
ಕೋಟೆ, ಇನ್ನಂಜೆ, ಬಡಾ, ತೆಂಕ, ಪಡುಬಿದ್ರೆ ಗ್ರಾಮ ಪಂಚಾಯತ್ ಮೂಲಕ ಹಾದು ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಪು ತಾಲೂಕಿನ ಹೆಜಮಾಡಿಯಲ್ಲಿ ಸೇರುತ್ತದೆ ಎಂದರು.

ಜಿಲ್ಲೆಯಲ್ಲಿ ಏರ್ಪಡಿಸಲಾಗುವ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬ ನಾಗರಿಕರು, ಕುಟುಂಬ ಸಮೇತ ಕ್ರಿಯಾಶೀಲರಾಗಿ ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸೋಣ ಎಂದರು. ಇದೇ ಸಂದರ್ಭದಲ್ಲಿ ಕುಂಜಾರುಗಿರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಮಾನವ ಸರಪಳಿಯನ್ನು ರಚಿಸಿ, ಪ್ರಜಾಪ್ರಭುತ್ವವನ್ನು ಸಂಭ್ರಮಿಸೋಣ, ಮಾನವ ಸರಪಳಿಯನ್ನು ನಿರ್ಮಿಸೋಣ ಎಂಬ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ. ಸಿದ್ದಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಕಾಪು ತಹಶೀಲ್ದಾರ್ ಪ್ರತಿಭಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.