ಮಂಡ್ಯದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

ಉಡುಪಿ: ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವದ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಉದ್ದೇಶಿಸಿ ವಕ್ತಾರ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಭಾರತದಲ್ಲಿ‌ ಅಲ್ಪಸಂಖ್ಯಾತರು ಬಹುಸಂಖ್ಯಾತರ ಧಾರ್ಮಿಕ ಕೇಂದ್ರಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಹಿಂದೂ ಹಬ್ಬಗಳನ್ನು ಆಚರಿಸಲು ಸವಾಲು ಎದುರಿಸುವಂತಾಗಿದೆ. ಇಷ್ಟೊಂದು ದಾಳಿ ಆಗುತ್ತಿದ್ದರೂ ಹಿಂದೂಗಳು ಮಾತ್ರ ದೂರು ದಾಖಲಿಸಲು‌ ಸೀಮಿತರಾಗಿದ್ದಾರೆ. ಈ ವ್ಯವಸ್ಥೆ ಹಿಂದೂಗಳ ಕೈ ಕಟ್ಟಿಹಾಕಿದೆ. ಮಂಡ್ಯ ಘಟನೆಯಲ್ಲಿ ಕ್ರಿಮಿನಲ್‌ಗಳು ಒಂಭತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಹೆದರುವ ವಾತಾವರಣ ನಿರ್ಮಾಣ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವರು ಮಂಡ್ಯ ಘಟನೆಯನ್ನು ಆಕಸ್ಮಿಕ ಎಂದು ಹೇಳಿದ್ದಾರೆ. ಆಕಸ್ಮಿಕ ಘಟನೆಗಳನ್ನು ಹೇಗೆ ಸೃಷ್ಟಿಸಬೇಕು ಎಂಬುದು ಜಿಹಾದಿಗಳಿಗೆ ಮಾತ್ರವಲ್ಲ, ಹಿಂದೂ ಸಮುದಾಯಕ್ಕೂ ತಿಳಿದಿದೆ. ಆದರೆ ಸಂವಿಧಾನಕ್ಕೆ ಬದ್ಧರಾಗಿ ನಾವು ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ. ನಮಗೆ ನ್ಯಾಯ ಸಿಗದಿದ್ದರೆ ಮುಂದೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಿಂದೂ ಮುಖಂಡ ಸುನೀಲ್ ಕೆ ಆರ್ ಮಾತನಾಡಿ, ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದರೆ ಅದು ಪ್ರಮುಖ ವಿಷಯ. ಗಣೇಶ ಚತುರ್ಥಿಯನ್ನು ಆಚರಿಸಲು ನಾವು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಆದರೆ ಮೊಹರಂ ನಂತಹ ಹಬ್ಬಗಳ ಆಚರಣೆಗೆ ಯಾವುದೇ ನಿಯಮಗಳಿಲ್ಲ. ಈ ದಾಳಿಯಲ್ಲಿ ಭಯೋತ್ಪಾದಕರು ಭಾಗಿಯಾಗಿರುವ ಶಂಕೆ ಇದೆ. ಆ ಕಾರಣಕ್ಕಾಗಿ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.