ಹಿರಿಯ ಸಾಹಿತಿ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಸ್ಮರಣಾರ್ಥ, ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ.

ಹೆಬ್ರಿ: ಯಾವುದೇ ಪ್ರಶಸ್ತಿಯ ಹಿಂದೆ ಹೋಗಬಾರದು. ನಮ್ಮಷ್ಟಕ್ಕೆ ನಾವೇ ಪ್ರಾಮಾಣಿಕವಾಗಿ ಉತ್ತಮ ಕೆಲಸಗಳನ್ನು ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಈ ನಿಟ್ಟಿನಲ್ಲಿ ಹೆಬ್ರಿಯ ಪ್ರತಿಷ್ಠಿತ ಚಾಣಕ್ಯ ಸಂಸ್ಥೆ ತೆರೆಮರೆಯ ಸಾಧಕರನ್ನು ನಾಡಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಅಂಕ ಗಳಿಕೆಯ ತರಬೇತಿಯೊಂದೇ ಶಿಕ್ಷಣವಾಗದೆ ಬದುಕು ಶಿಕ್ಷಣ ನೀಡುವ ಮತ್ತು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನವನ್ನು ಶಿಕ್ಷಣದ ಜೊತೆ ಮಾಡಿದಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದು ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಾಡಿನ ಹೆಸರಾಂತ ಸಾಹಿತಿ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಕೊಡಮಾಡುವ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ಆಶಾಕಿರಣ: ಸುನೀಲ್ ಕುಮಾರ್

ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದರ ಜತೆಗೆ ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣವಾಗಿದ್ದಾರೆ ಎಂದು ಚಾರ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಸುನೀಲ್ ಕುಮಾರ್ ಹೇಳಿದರು.

ಸಮಾಜಮುಖಿ ಕಾರ್ಯ ಶ್ಲಾಘನೀಯ: ನಿತ್ಯಾನಂದ ಶೆಟ್ಟಿ

ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸುವ ಚಾಣಕ್ಯ ಸಂಸ್ಥೆಯ ಸಮಾಜ ಮುಖಿ ಚಿಂತನೆ ಶ್ಲಾಘನೀಯ ಎಂದು ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.

ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಅವರ ಪುತ್ರ ಸನತ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೇ ವೀಣಾ ಯು.ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ ಹಾಗು ಜೇಸಿಐ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಚಾರ ಜವಾಹರ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲ ವಿ.ಕೆ. ಮನೋಹರ್, ನೇತಾಜಿ ಫ್ರೆಂಡ್ಸ್ ಕ್ಲಬ್‌ ಮುದ್ರಾಡಿ ಇದರ ಅಧ್ಯಕ್ಷ ಸಂತೋಷ್ ಪೂಜಾರಿ ಬಲ್ಲಾಡಿ, ಜೇಸಿಐ ಅಧ್ಯಕ್ಷೆ ರಕ್ಷಿತಾ ಪುಟ್ಟಣ್ಣ ಭಟ್, ಪೂರ್ವಾಧ್ಯಕ್ಷ ಪ್ರಶಾಂತ್ ಪೈ, ಜೇಸಿರೆಟ್ ಪೂರ್ವಾದ್ಯಕ್ಷೆ ಅನಿತಾ ಪಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ್ ಭಟ್ ಕಾರ್ಯಕ್ರಮ ನಿರೂಪಿಸಿದರು.