ಉಡುಪಿ: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ನೀಡಿದ ಅನುಮತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಿಂದ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ‘ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರ ಕಛೇರಿಗೆ ನುಗ್ಗುತ್ತೇವೆ’ ಎಂಬ ಪ್ರಚೋದನಕಾರಿ, ದೇಶ ವಿರೋಧಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಹಲವಾರು ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ದೂರು ಸಲ್ಲಿಸಿದ್ದರೂ ಪೊಲೀಸ್ ಇಲಾಖೆ ಐವನ್ ಡಿಸೋಜ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸದೇ ಇರುವುದು ಓಲೈಕೆ ರಾಜಕಾರಣದ ಪರಮಾವಧಿಯಾಗಿದೆ.
ಜಿಲ್ಲೆಯ ಶಿಕ್ಷಕರಿಗಾದ ಅನ್ಯಾಯವನ್ನು ವಿರೋಧಿಸಿ ನ್ಯಾಯಯುತ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿರುವುದು ಹಿಟ್ಲರ್ ಮಾದರಿಯ ಸರ್ವಾಧಿಕಾರಿ ಧೋರಣೆಯಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಾಂಗ್ರೆಸ್ಸಿನ ಕೈಗೊಂಬೆಯಾಗಿದೆ, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತಾಗಿವೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿರುವ ಕಾಂಗ್ರೆಸ್ ನಾಯಕರು ಸಂವಿಧಾನ ದತ್ತವಾದ ಹುದ್ದೆಯಲ್ಲಿರುವ ರಾಜ್ಯಪಾಲರು ಹಾಗೂ ದೇಶದ ಪ್ರಧಾನಿಯವರಿಗೆ ತುಚ್ಚ ಹೇಳಿಕೆಗಳ ಮೂಲಕ ಅವಮಾನಿಸಿರುವುದು ಸಂವಿಧಾನಕ್ಕೆ ಗೈದ ಘೋರ ಅಪಚಾರವಲ್ಲವೇ? ಹಗರಣಗಳ ಕೂಪದಲ್ಲಿ ಸಿಲುಕಿರುವ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಬಿಜೆಪಿ ವಿರುದ್ಧ ಇಂತಹ ಷಡ್ಯಂತ್ರಗಳಲ್ಲಿ ತೊಡಗಿರುವುದು ಖಂಡನೀಯ. ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಬೇಲ್ ಪಡೆದು ತಿರುಗಾಡುತ್ತಿರುವ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ದೇಶಭಕ್ತ ಸಮಾಜ ಸೇವಾ ಸಂಘಟನೆ ಆರ್.ಎಸ್.ಎಸ್ ಮತ್ತು ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯನ್ನು ಮೂದಲಿಸುವ ಜೊತೆಗೆ ಶತ್ರು ರಾಷ್ಟ್ರವನ್ನು ಹೊಗಳುತ್ತಾ ಭಾರತವನ್ನು ತೆಗಳುವ ಕೀಳು ಮಟ್ಟಕ್ಕೆ ಇಳಿದಿರುವುದು ದೇಶದ ಬಗ್ಗೆ ಕಾಂಗ್ರೆಸಿಗರಿಗೆ ಇರುವ ಕೀಳರಿಮೆಯನ್ನು ಸಾಬೀತುಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ರಸ್ತೆಗಳಿಗೆ ತೇಪೆ ಹಾಕಲಿಕ್ಕೂ ಹಣವಿಲ್ಲದ ದುಸ್ಥಿತಿಯಲ್ಲಿರುವ ರಾಜ್ಯ ಸರಕಾರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೂ ಚಿಕ್ಕಾಸು ಬಿಡುಗಡೆ ಮಾಡದೆ ಕೇವಲ ಓಲೈಕೆ ರಾಜಕಾರಣದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದ ಅಭಿವೃದ್ಧಿಗೆ ತಿಲಾಂಜಲಿ ನೀಡಿರುವ ರಾಜ್ಯ ಸರಕಾರದ ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ನಡೆಸುತ್ತಾ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಮುಖಂಡರ ದಯನೀಯ ಸ್ಥಿತಿ ಹಾಸ್ಯಾಸ್ಪದವೆನಿಸಿದೆ.
ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ಖ್ಯಾತಿಗೆ ಮಸಿ ಬಳಿಯುವ ದುರುದ್ದೇಶದಿಂದ ಹಿಜಾಬ್ ಪ್ರಕರಣದ ನೆಪವನ್ನು ಮುಂದಿಟ್ಟುಕೊಂಡು, ಕುಂದಾಪುರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಘೋಷಣೆಯಾಗಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದಿರುವ ಸರಕಾರ ಆಗಿರುವ ಪ್ರಮಾದವನ್ನು ತಕ್ಷಣ ಸರಿಪಡಿಸಬೇಕು.
ಅನ್ಯಾಯದ ವಿರುದ್ಧ ಬಿಜೆಪಿಯ ಜನ ಪರ ಹೋರಾಟ ಎಂದಿಗೂ ನಿಲ್ಲದು. ಜನತೆ ಕಾಂಗ್ರೆಸ್ಸಿನ ಜನವಿರೋಧಿ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಶಿಕ್ಷಕ ವಿರೋಧಿ ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.