ಉಡುಪಿ: ವರ್ಷದಿಂದ ವರ್ಷಕ್ಕೆ ಉಡುಪಿ ಜಿಲ್ಲೆಯಲ್ಲಿ ಹುಲಿ ವೇಷಗಳ ಅಬ್ಬರ ಹೆಚ್ಚುತ್ತಿದೆ. ಅಷ್ಟಮಿಯ ನಂತರ ಇದೀಗ ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿಸರ್ಜನಾ ಮೆರವಣಿಗೆ ವೇಳೆ ಹುಲಿವೇಷಗಳ ಭರಾಟೆ ಜೋರಾಗಿದೆ. ಅದರಲ್ಲೂ ಮರಿ ಹುಲಿಗಳ ಕಾರುಬಾರು ಜಬರ್ದಸ್ತ್ ಆಗಿದೆ.
ಹೌದು, ಕರಾವಳಿಯ ಜನರಿಗೆ ಹುಲಿವೇಷವೆಂದರೆ ಅದೇನೋ ಸೆಳೆತ. ಬಾಲ್ಯದಲ್ಲೇ ಹುಲಿ ವೇಷಗಳ ಬೆನ್ನು ಹತ್ತಿ ಹೋಗಿ ಕುಣಿಯುವ ಮಕ್ಕಳು ಇಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪುಟಾಣಿ ಮಕ್ಕಳು ವೇಷ ಧರಿಸಿ ಕುಣಿಯುವ ಪರಿಪಾಠ ಹೆಚ್ಚುತ್ತಿದೆ. ಹಿರಿಯ ವೇಷಧಾರಿಗಳನ್ನು ಮೀರಿಸುವಂತೆ, ಅತ್ಯುತ್ಸಾಹದಿಂದ ಮಕ್ಕಳು ಕುಣಿಯುವುದನ್ನು ಕಾಣುವುದೇ ಚಂದ. ಅದರಲ್ಲೂ ಮರ ಕಾಲುಗಳನ್ನು ಕಟ್ಟಿಕೊಂಡು ಮಕ್ಕಳು ಕುಣಿಯುವುದು ನಿಜಕ್ಕೂ ಅಚ್ಚರಿ. ಹಿಂದೆಲ್ಲ ಗಂಡಸರು ಮಾತ್ರ ಹುಲಿ ವೇಷ ಹಾಕುತ್ತಿದ್ದರು, ಕಳೆದ ನಾಲ್ಕೈದು ವರ್ಷಗಳಿಂದ ಮಹಿಳಾ ಹುಲಿಗಳ ಅಬ್ಬರ ಕೂಡ ಜೋರಾಗಿದೆ. ಇದೀಗ ಪುಟಾಣಿ ಹೆಣ್ಣುಮಕ್ಕಳು ಕೂಡ ಹುಲಿ ವೇಷ ಧರಿಸಿ ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕುವುದನ್ನು ಕಾಣಬಹುದು.
ಕಟಪಾಡಿಯಲ್ಲಿ ನಡೆದ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ವೇಳೆ, ಹುಲಿವೇಷ ಕುಣಿತದಲ್ಲಿ ಪುಟಾಣಿ ಮಕ್ಕಳದ್ದೇ ಕಾರುಬಾರು. ಮನೆಯ ಹಿರಿಯರ ಜೊತೆ ವೇಷ ಧರಿಸಿ ಸಖತ್ ಸ್ಟೆಪ್ಗಳನ್ನು ಹಾಕುವ ಮೂಲಕ ಗಣೇಶ ಭಕ್ತರ ಮನಸೂರೆಗೊಂಡಿದ್ದಾರೆ. ಈ ಮರಿ ಹುಲಿಗಳ ಜಬರ್ದಸ್ತ್ ಕುಣಿತವನ್ನು ಸಾರ್ವಜನಿಕರು ಕಣ್ತುಂಬಿಕೊಂಡು ಖುಷಿಪಟ್ಟರು.