ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೈಲ ಸೋರಿಕೆ; ಸರಣಿ ಅಪಘಾತ

ಉಡುಪಿ: ಕುಂದಾಪುರದಿಂದ ಬೈಂದೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ನಲ್ಲಿ ಆಯಿಲ್ ಸೋರಿಕೆಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಕುಂದಾಪುರದ ಕುಂಭಾಶಿಯಿಂದ ಹೆಮ್ಮಾಡಿಯವರೆಗೆ ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿದ್ದು, ಬೆಳಿಗ್ಗೆ ಸಣ್ಣ ಪ್ರಮಾಣದ ಮಳೆ ಬಂದ ಕಾರಣ ಮಳೆ‌ನೀರಿನೊಂದಿಗೆ ಆಯಿಲ್ ಮಿಶ್ರ ಸೇರಿಕೊಂಡು ರಸ್ತೆಯುದ್ದಕ್ಕೂ ಹರಡಿದೆ. ಇದರ ಪರಿಣಾಮ ಈ ರಸ್ತೆಯಲ್ಲಿ ಸಾಗುವ ಹಲವು ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ, ಕಾರು ಸಹಿತ ಲಘು ವಾಹನಗಳು ಬ್ರೇಕ್ ಹಿಡಿಯದೆ ಸಣ್ಣಪುಟ್ಟ ಅವಘಡಗಳು ನಡೆದಿದೆ.

ತಕ್ಷಣವೇ ಎಚ್ಚೆತ್ತ ಪೊಲೀಸ್ ಇಲಾಖೆ ಉಡುಪಿ-ಬೈಂದೂರು ಮಾರ್ಗದ ಒಂದು ಕಡೆ ರಸ್ತೆಯನ್ನು ಬಂದ್ ಮಾಡುವ ಮೂಲಕ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೆದ್ದಾರಿಯಲ್ಲಿ ಚೆಲ್ಲಿದ ಆಯಿಲ್‌ ಸ್ವಚ್ಛಗೊಳಿಸಿದರು.