ಉಡುಪಿ: ಕುಂದಾಪುರದ ಶಿಕ್ಷಕರೊಬ್ಬರಿಗೆ ಅಂತಿಮಗೊಳಿಸಲಾಗಿದ್ದ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಇಂದು ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರಕಾರದ ಸೇಡಿನ ರಾಜಕಾರಣದ ವಿರುದ್ಧ ಬಿಜೆಪಿ ಕಾರ್ಯಕರ್ತರು ದಿಕ್ಕಾರ ಕೂಗಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಹೊತ್ತು ಮಾನವ ಸರಪಳಿ ರಚಿಸಿ ಮಣಿಪಾಲ-ಉಡುಪಿ ಹೆದ್ದಾರಿ ತಡೆದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಬಿಟ್ಟು, ಕೇವಲ ಮುಸ್ಲಿಂ ಸಮುದಾಯದ ಒಲೈಕೆಯಲ್ಲಿ ತೊಡಗಿದೆ. ಪ್ರಶಸ್ತಿಯನ್ನು ತಡೆಹಿಡಿಯುವ ಮೂಲಕ ಸಿದ್ದರಾಮಯ್ಯನವರ ಮನಸ್ಥಿತಿ ಏನೆಂಬುವುದು ಗೊತ್ತಾಗಿದೆ. ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರು ಅತ್ಯಂತ ಪ್ರಾಮಾಣಿಕರು. ಪ್ರಶಸ್ತಿಗಾಗಿ ಯಾರ ಮನೆಬಾಗಿಲಿಗೂ ಹೋಗಿಲ್ಲ. ಯಾರ ಬಳಿಯೂ ಭೀಕ್ಷೆ ಬೇಡಲು ಹೋಗಿಲ್ಲ. ಅವರ ಕೊಡುಗೆ, ಸಾಧನೆಯನ್ನು ಪರಿಗಣಿಸಿ ಸರಕಾರವೇ ರಚಿಸಿದ ಆಯ್ಕೆ ಸಮಿತಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆದರೆ, ಹಿಜಾಬ್ ವಿವಾದದ ಸಂದರ್ಭದಲ್ಲಿ ಸರಕಾರದ ನಿಯಮ ಪಾಲಿಸಿದ್ದರೆ ಎಂಬ ಕಾರಣಕ್ಕಾಗಿ ಅವರ ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ. ಹಿಜಾಬ್ ಧಾರಿಗಳನ್ನು ಒಲೈಕೆ ಮಾಡುವ ಮೂಲಕ ಉಡುಪಿ ಜಿಲ್ಲೆಯ ಜನತೆಗೆ ಅನ್ಯಾಯ ಮಾಡಿದ್ದಾರೆ. ಶಿಕ್ಷಕ ವೃಂದಕ್ಕೆ ಅಗೌರವ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದೂ ಶಿಕ್ಷಕರು, ವೈದ್ಯರು ಹಿಜಾಬ್ ಧಾರಿಗಳಿಗೆ ಶಿಕ್ಷಣ ಕೊಡುವುದಿಲ್ಲ, ಆರೋಗ್ಯ ಸೇವೆ ನೀಡುವುದಿಲ್ಲ ಎಂದು ನಿರ್ಧಾರ ಮಾಡಿದರೆ, ಅಲ್ಪಸಂಖ್ಯಾತರ ಪರಿಸ್ಥಿತಿ ಏನಾಗಬಹುದು ಎಂದು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು. ಸಿದ್ದರಾಮಯ್ಯನವರು ಪ್ರಾಂಶುಪಾಲ ರಾಮಕೃಷ್ಣ ಅವರ ಮನೆಗೆ ಬಂದು ಪ್ರಶಸ್ತಿ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಮುಖಂಡರಾದ ವೀಣಾ ಶೆಟ್ಟಿ, ಸಂದ್ಯಾ ರಮೇಶ್, ಶ್ರೀಕಾಂತ್ ನಾಯಕ್, ಕಿರಣ್ ಕುಮಾರ್, ವಿಜಯ ಕೊಡವೂರು ಮೊದಲಾದವರು ಪಾಲ್ಗೊಂಡಿದ್ದರು.