ಉಡುಪಿ ನಗರದ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾದ, ಸ್ವಾತಂತ್ರ್ಯ ಪೂರ್ವದಲ್ಲಿ ಸಬ್ ಜೈಲ್ ಆಗಿದ್ದ, ಹಳೆ ತಾಲೂಕು ಕಚೇರಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಬ್ರಿಟಿಷರ ಆಳ್ವಿಕೆ ಇದ್ದ 1906ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡ ಮಾನ್ಯತೆಯೊಂದಿಗೆ ಉಳಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಇದೀಗ ಕಟ್ಟಡವನ್ನು ನೆಲಸಮಗೊಳಿಸುವ ನಿಟ್ಟಿನಲ್ಲಿ ಅದರ ಹೆಂಚುಗಳನ್ನು ತೆಗೆಯುವ ಕಾರ್ಯ ಆರಂಭಗೊಂಡಿದೆ. ಈ ಜಾಗದಲ್ಲಿ ಇನ್ನು ನಗರಸಭೆಯ ಹೊಸ ಕಟ್ಟಡ ನಿರ್ಮಾಣವಾಗಲಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಉಡುಪಿ ನಗರದಲ್ಲಿರುವ ವಿರಳ ಪಾರಂಪರಿಕ ಕಟ್ಟಡಗಳಲ್ಲಿ ಇದೂ ಒಂದು. ಸಣ್ಣ ಕೆಂಪು ಇಟ್ಟಿಗೆಗಳನ್ನು ಬಳಸಿ ಮದ್ರಾಸ್ ರೂಫಿಂಗ್ ಮಾದರಿಯಲ್ಲಿ ನಿರ್ಮಿಸಿದ ಕಟ್ಟಡ ಇದು. ನಿರ್ಮಾಣದ ಆರಂಭದಲ್ಲಿ ಈ ಕಟ್ಟಡದಲ್ಲಿ ಕೋರ್ಟ್ ಕಲಾಪಗಳು ನಡೆಯುತ್ತಿದ್ದವು ಮತ್ತು ಜೈಲು ಕೂಡಾ ಇಲ್ಲೇ ಇತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಹಲವರು ಇಲ್ಲೇ ಜೈಲುವಾಸ ಅನುಭವಿಸಿದ್ದರು.
ಈ ಕಟ್ಟಡದ ಮೇಲಂತಸ್ತಿನಲ್ಲಿ 12 ಮತ್ತು ಕೆಳ ಅಂತಸ್ತಿನಲ್ಲಿ 12 ಸೆಲ್ಗಳಿವೆ. ಉಡುಪಿಯಲ್ಲಿ ಹೊಸ ಜೈಲು ನಿರ್ಮಾಣವಾಗುವವರೆಗೂ ಇದೇ ಜೈಲಿನಲ್ಲಿ ಕೈದಿಗಳನ್ನು ಇಡಲಾಗುತ್ತಿತ್ತು. ಸುಮಾರು 10 ವರ್ಷದಿಂದ ಈ ಕಟ್ಟಡ ಪಾಳುಬಿದ್ದಿದೆ.
ಆದರೆ ಕಟ್ಟಡ ಕೆಡವದೆ ಸಂರಕ್ಷಿಸಬೇಕು ಎಂಬ ನಿಟ್ಟಿನಲ್ಲಿ ಕಲಾವಿದರು, ಕಟ್ಟಡ ವಿನ್ಯಾಸಕರು ದೊಡ್ಡ ಆಂದೋಲನ ಮಾಡಿದ್ದರು. ಆದರೆ ಅಂತಿಮವಾಗಿ ನಗರಸಭೆಯ ಹೊಸ ಕಟ್ಟಡವನ್ನು ಈ ಜಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು ಕೆಡವಲು 12 ಲಕ್ಷ ರೂ.ಗಳಿಗೆ ಟೆಂಡರ್ ಆಗಿದ್ದು, ಈಗ ಹೆಂಚು ತೆಗೆಯುವ ಕೆಲಸ ಆರಂಭವಾಗಿದೆ. ಈ ನಡುವೆ ಸಬ್ಜೈಲಿನ ಭಾಗವನ್ನು ಉಳಿಸಿ ಉಳಿದ ಕೆಲಸವನ್ನು ಮುಂದುವರಿಸುವಂತೆ ಡಿಸಿ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.