ಮೂರು ಪರ್ವತ ಏರಿದ ಉಡುಪಿಯ ಯುವಕ

ಉಡುಪಿ: ಉಡುಪಿಯ ಬ್ರಹ್ಮಗಿರಿಯ ಯುವಕ ಸಿದ್ವಿನ್ ಶೆಟ್ಟಿ ಅವರು ಮೂರು ಎತ್ತರದ ಶಿಖರಗಳನ್ನು ಯಶಸ್ವಿಯಾಗಿ ಏರುವ ಮೂಲಕ ಒಂದು ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಸುಮಾರು 14000 ಅಡಿ ಎತ್ತರದ ಮಹಾಗುಣ ಪರ್ವತ, 14200ಕ್ಕೂ ಅಡಿ ಎತ್ತರದ ಅಫರ್ವತ್ ಶಿಖರ ಮತ್ತು ಹಿಮಾಚಲ ಪ್ರದೇಶದಲ್ಲಿರುವ 20183ಕ್ಕೂ ಅಧಿಕ ಎತ್ತರದ ಮೌಂಟ್ ಯುನಾಮ್ ಶಿಖರಗಳನ್ನು ಏರಿ ಕರ್ನಾಟಕ ಮತ್ತು ತುಳುನಾಡಿನ ಧ್ವಜವನ್ನು ಹಾರಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಸಿದ್ವಿನ್ ಶೆಟ್ಟಿ ಅವರು ಉಡುಪಿ ಬ್ರಹ್ಮಗಿರಿ ಸಮೀಪದ ಸುರೇಶ್ ಕೃಷ್ಣ ಶೆಟ್ಟಿ ಮತ್ತು ಸುಜಯ ಎಸ್ ಶೆಟ್ಟಿ ದಂಪತಿಯ ಪುತ್ರರಾಗಿದ್ದು ನಿಟ್ಟೆ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪದವಿ ಹೊಂದಿರುವ ಇವರಿಗೆ ಟ್ರೆಕ್ಕಿಂಗ್ ಬಗ್ಗೆ ಒಲವು.

2023 ರಲ್ಲಿ ವಿಶ್ವದ ಎತ್ತರದ ಲಡಾಖ್ ನ ಉಮ್ಲಿಂಗ್ ಲಾ ಮತ್ತು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಮೇಲೆ ತುಳುನಾಡಿನ ಧ್ವಜವನ್ನು ಹಾರಿಸಿದ್ದರು.ಸಿದ್ವಿನ್ ಅವರು 2024 ರ ಜುಲೈ 21 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಮೂಲಭೂತ ಪರ್ವತಾರೋಹಣ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ತನ್ನ ಯಾತ್ರೆಯನ್ನು ಆರಂಭಿಸಿ ಅದರಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ಟ್ರೆಕ್ಕಿಂಗ್ ಮತ್ತು ಪರ್ವತಾರೋಹಣಕ್ಕಾಗಿ ಸಿದ್ವಿನ್ ಅವರ ಉತ್ಸಾಹವು ಅವರನ್ನು ಭಾರತ, ನೇಪಾಳ ಮತ್ತು ಭೂತಾನ್ನಾದ್ಯಂತ ಹಲವಾರು ಸಾಹಸಗಳಲ್ಲಿ ತೊಡಗಿಸಿಕೊಳ್ಳೂವಂತೆ ಮಾಡಿದೆ. ಅವರು ಈಗಾಗಲೇ 51 ಟ್ರಕ್ಕಿಂಗ್ ಸಹಿತ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಹೆಚ್ಚಾಗಿ ಏಕಾಂಗಿಯಾಗಿ, ಮತ್ತು ಎತ್ತರದ ಸ್ಥಳಗಳಿಗೆ ವ್ಯಾಪಕವಾದ ಬೈಕು ಸವಾರಿಗಳು ಮತ್ತು ತೀರ್ಥಯಾತ್ರೆಗಳನ್ನು ಕೈಗೊಂಡಿರುವ ಸಿದ್ವಿನ್ ಅವರು ಇನ್ನಷ್ಟು ಸಾಧನೆಗಳನ್ನು ತೋರಲಿ ಎಂದು ಹಾರೈಸುವ.