ವಿಶ್ವಕರ್ಮ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

ಉಡುಪಿ: ಪ್ರಧಾನಮಂತ್ರಿ ವಿಶ್ವಕರ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭವು ಬುಧವಾರ ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವಕರ್ಮ ಯೋಜನೆಯ ಮಾಹಿತಿಯನ್ನು ನೀಡುವುದರೊಂದಿಗೆ ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಅಧಿಕಾರಿಗಳ ಪರಿಶ್ರಮದಿಂದ ಮಾತ್ರ ವಿಶ್ವಕರ್ಮ ಯೋಜನೆಯು ಸಫಲ ಹೊಂದಿ ಫಲಾನುಭವಿಗಳಿಗೆ ತಲುಪಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಕಛೇರಿ ಜಂಟಿ ನಿರ್ದೇಶಕಿ ಮಂಜುಳಾ ಎಸ್., ಅಲೆವೂರು ಪಂಚಾಯತಿ ಅಧ್ಯಕ್ಷ ಯತೀಶ್ ಕುಮಾರ್, ಐ.ಎಂ.ಸಿ ಅಧ್ಯಕ್ಷ ವಿಶ್ವನಾಥ ಭಟ್, ಪಂಚಾಯತ್ ಸದಸ್ಯ ನಾಗರಾಜ್, ಫಲಾನುಭವಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಚಾರ್ಯ ಶಿವಕುಮಾರ್ ಎಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪೂರ್ಣಿಮಾ ರಾವ್ ಕೆ ನಿರೂಪಿಸಿದರೆ, ಸಂಸ್ಥೆಯ ತರಬೇತಿ ಅಧಿಕಾರಿ ಭಾಸ್ಕರ್ ಎಂ.ಆರ್ ವಂದಿಸಿದರು.