ಉಡುಪಿ: ವ್ಯಕ್ತಿಯನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಕ್ರೀಡೆಯು ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಯು ನಮ್ಮನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುವುದರೊಂದಿಗೆ ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರು.
ಅವರು ಇಂದು ನಗರದ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪಿ.ಜಿ.ಎ.ವಿ ಹಾಲ್ನಲ್ಲಿ, ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ), ಲಯನ್ಸ್ ಕ್ಲಬ್ ಮಿಡ್ಟೌನ್ ಉಡುಪಿ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ರೇಂಜರ್ಸ್ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ಕ್ರಾಸ್ ವಿಭಾಗ, ತೆಂಕನಿಡಿಯೂರು ಸ್ಪೋಟ್ಸ್ ಕ್ಲಬ್ (ರಿ) ಹಾಗೂ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶ ಕಂಡ ಅದ್ಭುತ ಕ್ರೀಡಾಪಟು ಹಾಕಿ ದಂತಕಥೆ ಮೇಜರ್ ಧ್ಯಾನ್ಚಂದ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅವರು ಕ್ರೀಡೆಯಲ್ಲಿ ತೋರಿಸಿದ ಪರಿಶ್ರಮ, ತ್ಯಾಗ, ಬುದ್ಧಿವಂತಿಕೆ ಪ್ರತಿಯೊಬ್ಬ ಕ್ರೀಡಾಪಟುವಿಗೂ ಮಾದರಿಯಾಗಲಿ ಎಂದರು.
ಕ್ರೀಡಾ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು. ಯುವಜನತೆ ಶಿಕ್ಷಣದ ಜೊತೆ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಹೆಚ್ಚು ತೊಡಗಿಸಿಕೊಳ್ಳಬೇಕು. ಜಿಲ್ಲೆಯು ಶೈಕ್ಷಣಿಕವಾಗಿ ಮುಂದಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ಕೂಡ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ಕುಂದಾಪುರ ರೆಡ್ಕ್ರಾಸ್ ಸೊಸೈಟಿಯ ಅಧ್ಯಕ್ಷ ಎಸ್ ಜಯಕರ ಶೆಟ್ಟಿ ಮಾತನಾಡಿ, ಕಾಲೇಜಿನ ವತಿಯಿಂದ ಹಲವಾರು ಸಮಾಜ ಮುಖಿ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಅದರಲ್ಲಿ ರಕ್ತದಾನ ಶಿಬಿರವು ಒಂದಾಗಿದೆ. ಒಂದು ಯೂನಿಟ್ ರಕ್ತದಿಂದ ಮೂರು ರೋಗಿಗಳ ಜೀವನವನ್ನು ಉಳಿಸಬಹುದಾಗಿದ್ದು, ವಿದ್ಯಾಥಿಗಳು ರಕ್ತದಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು. ಡಾ. ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಎಸ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯು ಬದುಕಿನ ಬಹಳ ಮುಖ್ಯ ಭಾಗವಾಗಿದ್ದು, ಚಿಕ್ಕಂದಿನಿಂದಲೇ ಕ್ರೀಡೆಯನ್ನು ಮೈಗೂಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದ ಅವರು ರಕ್ತದಾನಕ್ಕಿಂತ ಪರಿಶುದ್ಧವಾದ ದಾನ ಮತ್ತೊಂದಿಲ್ಲ. ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಲಯನ್ಸ್ ಕ್ಲಬ್ ಮಿಡ್ಟೌನ್ ಉಡುಪಿ ಅಧ್ಯಕ್ಷ ಅನಂತಶೆಟ್ಟಿ, ತೆಂಕನಿಡಿಯೂರು ಸ್ಪೋಟ್ಸ್ ಕ್ಲಬ್ನ ಅಧ್ಯಕ್ಷ ಸುಶಾನ್ ಶೆಟ್ಟಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರೊ. ನಿಕೇತನಾ ಸ್ವಾಗತಿಸಿ, ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್ ನಿರೂಪಿಸಿದರೆ, ದಿನೇಶ್ ವಂದಿಸಿದರು.