ಉಡುಪಿ: ಜಿಲ್ಲೆಯ ಪ್ರತಿಯೊಬ್ಬ ನಾಗರೀಕನ ದೈನಂದಿನ ಜೀವನದಲ್ಲಿ ಆಧಾರ್ ಕಾರ್ಡ್ ಮಹತ್ವದ್ದಾಗಿದ್ದು, ವ್ಯಕ್ತಿಯನ್ನು ಗುರುತಿಸುವುದು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯವಾಗಿದ್ದು ಇದನ್ನು ಪ್ರತಿಯೊಬ್ಬರು ಚಾಲ್ತಿಯಲ್ಲಿರುವ ಆಧಾರ್ ಗುರುತಿನ ಚೀಟಿ ಹೊಂದಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಭಾರತೀಯ ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ವಯೋಮಾನದವರಿಗೂ ಹೊಸಕಾರ್ಡ್ಗಳು, ಕಾರ್ಡುಗಳ ಸ್ಯಾಚುರೇಷನ್ ಹಾಗೂ ಕಡ್ಡಾಯ ಬಯೋ ಮೆಟ್ರಿಕ್ ನವೀಕರಣಗೊಳಿಸುವುದರೊಂದಿಗೆ ಎಲ್ಲಾ ವಯೋಮಾನದವರೂ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್ ಅನ್ನು ಹೊಂದಬೇಕು ಎಂದರು.
5 ವರ್ಷದೊಳಗಿನ ಮಕ್ಕಳು ಹೊಸದಾಗಿ ಆಧಾರ್ ಕಾರ್ಡ್ ನೊಂದಣಿಯನ್ನು ಸಮೀಪದ ಅಂಚೆ ಕಚೇರಿ, ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಅವಶ್ಯ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಈವರೆಗೆ 14,12,357 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷದೊಳಗಿನ 37,700, 5 ರಿಂದ 18 ವರ್ಷದವರು 2,06,567, 18 ವರ್ಷ ಮೇಲ್ಪಟ್ಟ 11,73,090 ಜನರಿದ್ದಾರೆ ಎಂದರು. ಕಳೆದ 10 ವರ್ಷಗಳ ಹಿಂದೆ ಆಧಾರ್ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರು ಗುರುತಿನ ಹಾಗೂ ವಿಳಾಸ ದಾಖಲೆಯನ್ನು ಸಮೀಪದ ಆಧಾರ್ ಕೇಂದ್ರದಲ್ಲಿ ಮರು ಅಪ್ಲೋಡ್ ಮಾಡಿ ನೊಂದಣಿ ಮಾಡಿಕೊಳ್ಳಬೇಕು. ಇದನ್ನು myAadhaar.uidai.gov.in. portal ನಲ್ಲಿ ಆನ್‌ಲೈನ್ ಮೂಲಕವಾಗಿ ನೇರವಾಗಿ ನವಿಕರಿಸಲು ಅವಕಾಶವಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು. ಒಂದೊಮ್ಮೆ ನವೀಕರಿಸದೆ ಇದ್ದಲ್ಲಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಸೌಲಭ್ಯ ಅಥವಾ ಸೇವೆ ಪಡೆಯಲು ಅನಾನುಕೂಲವಾಗುತ್ತದೆ ಎಂದರು. 15 ವರ್ಷದ ನಂತರ ಕಡ್ಡಾಯವಾಗಿ ಆಧಾರ್ ಬಯೋಮೆಟ್ರಿಕ್ ನವೀಕರಣ ಮಾಡಿಸಿಕೊಳ್ಳಬೇಕು. ಇದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟವರು 43,437 ಜನರು, 15 ವರ್ಷ ಮೇಲ್ಪಟ್ಟ 44,481 ಜನ ಸೇರಿದಂತೆ ಒಟ್ಟು 87,918 ಜನರು ನವೀಕರಿಕೊಳ್ಳಬೇಕಿದೆ ಎಂದರು.
ರಾಜ್ಯ ಆಧಾರ್ ನೋಂದಣಿ ಪ್ರಾಧಿಕಾರವು ಜಿಲ್ಲೆಯ ಆಯ್ದ ಬ್ಯಾಂಕ್‌ಗಳು, ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲು ಅದೇಶಿಸಿದ್ದು, ಅದರಂತೆ ಪ್ರತಿಯೊಂದು ಆಧಾರ್ ನೋಂದಣಿ ಕೇಂದ್ರವನ್ನು ಸೂಚಿಸಿದ ಕಚೇರಿ ಸಮಯದಲ್ಲಿ ತೆರೆದು ಸಾರ್ವಜನಿಕರಿಗೆ ಆಧಾರ್ ಸೇವೆ ಪಡೆಯಲು ಅನುವು ಮಾಡಿ ಕೊಡಬೇಕು ಎಂದರು.
ಆಧಾರ್ ಕಾರ್ಡ್ ಹೊಂದಿದವರು ಮರಣ ಹೊಂದಿದ್ದಲ್ಲಿ ಅವರ ಕಾನೂನು ಬದ್ಧ ವಾರಾಸುದಾರರು ಅವರ ಮರಣ ಪ್ರಮಾಣ ಪತ್ರವನ್ನು ನೀಡಿ, ಆಧಾರ್ ಕಾರ್ಡ್ ಅನ್ನು ತಪ್ಪದೇ ರದ್ದುಪಡಿಸಬೇಕು. ರದ್ದುಪಡಿಸದೇ ಇದ್ದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಇದರ ಉಪಯೋಗ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಈ ರೀತಿ ಆದಲ್ಲಿ ಕಾನೂನುಬದ್ಧ ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರತಿಯೊಬ್ಬ ನಾಗರೀಕನು ತಮ್ಮ ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಉತ್ತೇಜಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದ ಅವರು, ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಲು ಅನುಕೂಲವಾಗುವಂತೆ ವಿಶೇಷ ಶಿಬಿರ ಗಳನ್ನು ಶಾಲಾ-ಕಾಲೇಜು, ಅಂಗನವಾಡಿಗಳಲ್ಲಿ ಏರ್ಪಡಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಯು.ಐ.ಡಿ.ಎ.ಐ ಡೈರೆಕ್ಟರ್ ಮನೋಜ್ ಕುಮಾರ್, ಯು.ಐ.ಡಿ.ಎ.ಐ ಅಸಿಸ್ಟೆಂಟ್ ಮ್ಯಾನೆಜರ್ ಮೊಹಮ್ಮದ್ ಮೂಸಾಬ್, ರಿಕೇಶ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್‌ಪಿ ಸಿದ್ಧಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಡಿಡಿಪಿಯು ಗಣಪತಿ, ಡಿಡಿಪಿಐ ಮಾರುತಿ, ಐ.ಟಿ.ಡಿ.ಪಿ ಯೋಜನಾ ಸಮನ್ಯಾಧಿಕಾರಿ ನಾರಾಯಣ ಸ್ವಾಮಿ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.