ಉಡುಪಿ: ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ, ಪದವಿ ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿ ಮತ್ತು ವಿಶ್ವವಿದ್ಯಾನಿಲಯದ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಕುಂದಾಪುರದಲ್ಲಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತು.
ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ 188 ಕಾಲೇಜುಗಳಲ್ಲಿ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದು, ವಿಶ್ವವಿದ್ಯಾನಿಲಯವು ಇಂದು ಸಮಸ್ಯೆಗಳ ಗೂಡಾಗಿದೆ. ಈಗಾಗಲೇ ರಾಜ್ಯದೆಲ್ಲೆಡೆ ಪದವಿ ಪೂರ್ವ ಕಾಲೇಜುಗಳ ತರಗತಿಗಳು ಶುರುವಾಗಿ ಎರಡು ತಿಂಗಳು ಕಳೆದಿವೆ. ಪದವಿ ವಿದ್ಯಾರ್ಥಿಗಳಿಗೂ ಸಹ ಈಗಾಗಲೇ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಗಿದು ತರಗತಿಗಳು ಪ್ರಾರಂಭವಾಗಿವೆ. ಆದರೆ ಹಾಸ್ಟೆಲ್ ಪ್ರವೇಶಾತಿಗಳು ಪ್ರಾರಂಭವಾಗದೇ ಇರುವುದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಹಾಸ್ಟೆಲ್ ಪ್ರವೇಶಾತಿಯನ್ನು ಆರಂಭಿಸಬೇಕು ಮತ್ತು ಹಾಸ್ಟೇಲ್ ಸೀಟುಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ವರ್ಷ ಪದವಿ ವಿದ್ಯಾರ್ಥಿಗಳಿಗೆ ಸೂಕ್ತವಾಗಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳು ಅವರ ತರಗತಿಗಳು ಸಂಪೂರ್ಣವಾಗದೇ ಪರೀಕ್ಷೆಗಳಿಗೆ ಹಾಜರಾಗುವ ಪರಿಸ್ಥಿತಿ ಇದೆ. ಸರ್ಕಾರ ತಡ ಮಾಡದೆ ಕೂಡಲೇ ಉಪನ್ಯಾಸಕರ ಸಂಪೂರ್ಣ ನೇಮಕಾತಿಯನ್ನು ಮಾಡಬೇಕು. ಕಳೆದ ತಿಂಗಳು ನಡೆದ ಸೆಮಿಸ್ಟರ್ ಪರೀಕ್ಷೆಯ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಬಂದು ಹತ್ತು ದಿನಗಳು ಕಳೆದಿವೆ. ಆದರೆ ಅನೇಕ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಪಡೆಯಲು ಕಷ್ಟವಾಗುತ್ತಿದೆ. ಉನ್ನತ ಶಿಕ್ಷಣ ಹಾಗೂ ಉದ್ಯೋಗಾಕಾಂಕ್ಷಿಗಳು ಪರದಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತೀ ವರ್ಷ ಅಂಕಪಟ್ಟಿ ಹಾಗೂ ಪ್ರಮಾಣಪತ್ರ ಪ್ರೊಸೆಸಿಂಗ್ ಚಾರ್ಜು 280 ರೂಪಾಯಿ ಪಡೆಯಲಾಗುತ್ತಿದ್ದರೂ ಅಂಕಪಟ್ಟಿಯನ್ನು ಕಲ್ಪಿಸುವಲ್ಲಿ ವಿಶ್ವವಿದ್ಯಾನಿಲಯ ವಿಫಲವಾಗುತ್ತಿದೆ. ವಿಳಂಬವಾಗಿ ಫಲಿತಾಂಶ, ಅಂಕ ಮರು ಪರಿಶೀಲನೆಯ ನಂತರದ ಶೂನ್ಯ ಮರುಪಾವತಿ, ಕ್ರೀಡಾ ಶುಲ್ಕ ಹೆಚ್ಚಳದ ಪಾಲು ಕಾಲೇಜುಗಳಿಗೆ ಬಾರದೇ ಇರುವುದು, ಕಳೆದ ವರ್ಷದ ಅಂಕಿ ಅಂಶದ ಪ್ರಕಾರ ಸುಮಾರು 1.68 ಕೋಟಿ ರೂಪಾಯಿ ವಿಶ್ವವಿದ್ಯಾನಿಲಯ ಕ್ರೀಡೆಗೆ ವ್ಯಯಿಸಿದ್ದು, ಕೇವಲ 51 ಕಾಲೇಜಿನಿಂದ ಸುಮಾರು 2.23 ಕೋಟಿ. ವಸೂಲಾತಿಯಾಗಿದೆ. ಉಳಿದ ಹಣ ದುರುಪಯೋಗವಾಗಿರುವ ಶಂಕೆಯಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಪಡಿಸಿದರು. ಕುಂದಾಪುರದ ಶಾಸ್ತ್ರೀ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿದ ಎಬಿವಿಪಿ ವಿದ್ಯಾರ್ಥಿಗಳು, ತಾಲೂಕು ಕಚೇರಿ ಮುಮಭಾಗದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್ ಶೋಭಾ ಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆದರು.