ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ

ಉಡುಪಿ: ಉಡುಪಿ ನಗರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ರಜನಿ ಹೆಬ್ಬಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಚಂದ್ರ ಅವರು ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ‌ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು. ಈ ಎರಡು ಸ್ಥಾನಗಳಿಗೆ ಕ್ರಮವಾಗಿ ಗುಂಡಿಬೈಲು ವಾರ್ಡ್ ನ ಪ್ರಭಾಕರ ಪೂಜಾರಿ ಹಾಗೂ ಒಳಕಾಡು ವಾರ್ಡ್ ನ ರಜನಿ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದರು.

ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಘೋಷಿಸಿದರು.

ಪ್ರಭಾಕರ ಪೂಜಾರಿ ಗುಂಡಿಬೈಲು ವಾರ್ಡ್ ನಿಂದ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ರಜಿನಿ ಹೆಬ್ಬಾರ್ ಒಳಕಾಡು ವಾರ್ಡ್ ನಿಂದ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 35 ಸಂಖ್ಯಾಬಲ ಇರುವ ನಗರಸಭೆಯಲ್ಲಿ ಬಿಜೆಪಿ 32 ಹಾಗೂ ಕಾಂಗ್ರೆಸ್ 3 ಸದಸ್ಯರನ್ನು ಹೊಂದಿದೆ.