ಸಾರ್ವಜನಿಕರು ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ: ಜಿಲ್ಲಾಧಿಕಾರಿ ಡಾ.ಕೆ ವಿದ್ಯಾ ಕುಮಾರಿ

ಉಡುಪಿ: ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು
ಮಳೆಯಾಗುತ್ತಿರುವುದರಿಂದ ಹಾಗೂ ವಿಪರೀತ ಉಷ್ಣಾಂಶದ ಹಿನ್ನಲೆ ಹವಾಮಾನ ಬದಲಾವಣೆಯಿಂದ ಸೊಳ್ಳೆಗಳಿಂದ ಹರಡುವ
ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ,
ಚಿಕುನ್ ಗುನ್ಯಾ ಮತ್ತು ಮೆದುಳು ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಂದ ಸುರಕ್ಷಿತರಾಗಿರಲು ಬೇಕಾದಂತಹ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರವಹಿಸಬೇಕು.

2025 ರ ವೇಳೆಗೆ ಕರ್ನಾಟಕ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಸಾಧಿಸಬೇಕಾಗಿರುವುದರಿಂದ ಎಲ್ಲ ಹಂತಗಳಲ್ಲೂ ಮಲೇರಿಯಾ ನಿವಾರಣಾ ಚಟುವಟಿಕೆಗಳನ್ನು
ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಜಿಲ್ಲೆಯಲ್ಲಿ ವಿವಿಧ ಸಮರೋಪಾದಿಯ
ಚಟುವಟಿಕೆಗಳ ಅನುಷ್ಟಾನದಿಂದ ಮಲೇರಿಯಾ ರೋಗವು ನಿವಾರಣಾ ಹಂತಕ್ಕೆ ತಲುಪಿದ್ದು, 2025ರ ವೇಳೆಗೆ ಮಲೇರಿಯಾ ನಿವಾರಣಾ ಗುರಿ ಸಾಧಿಸುವ ಉದ್ದೇಶವನ್ನು ಹೊಂದಲಾಗಿರುತ್ತದೆ.

ಪ್ರಸ್ತುತ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು
ಗಣನೀಯವಾಗಿ ಕಡಿಮೆಯಾಗಿದ್ದು, ವರದಿಯಂತೆ ಮಲೇರಿಯಾ ನಿವಾರಣಾ ವರ್ಗೀಕರಣದಲ್ಲಿ ವರ್ಗ -1 ಎಲಿಮಿನೇಷನ್ ಫೇಸ್ ಅಂದರೆ ನಿವಾರಣಾ ಹಂತವನ್ನು ತಲುಪಿರುತ್ತದೆ. ಆದ್ದರಿಂದ ಮಲೇರಿಯಾ
ನಿವಾರಣಾ ಗುರಿ ಸಾಧನೆಯ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಚುರುಕುಗೊಳಿಸಿದಾಗ ಮಾತ್ರವೇ, ನಾವು ಶೂನ್ಯ ಮಲೇರಿಯಾ ವರ್ಗೀಕರಣವನ್ನು ತಲುಪಬಹುದಾಗಿದೆ.

ರೋಗ ನಿಯಂತ್ರಣಕ್ಕೆ ವಿಶೇಷ ಒತ್ತು:

ಸಾಂಕ್ರಾಮಿಕ ರೋಗಗಳ ತಡೆಗೆ ವಿಶೇಷ ಒತ್ತು ನೀಡಲಾಗಿದ್ದು, ಸಾಂಕ್ರಾಮಿಕ ರೋಗ ಪತ್ತೆ, ಸಂಪೂರ್ಣ ಚಿಕಿತ್ಸೆ ಹಾಗೂ ನಿಯಂತ್ರಣ ಕ್ರಮಗಳ ಅನುಷ್ಠಾನದ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷವಾಗಿ ಡೆಂಗ್ಯೂ ತಡೆಯುವ ನಿಟ್ಟಿನಲ್ಲಿ ಲಾರ್ವಾ ಉತ್ಪತ್ತಿ ತಾಣಗಳ ನಾಶ ಹಾಗೂ ಮಲೇರಿಯಾ ನಿಯಂತ್ರಣದಲ್ಲಿ ಸಕ್ರಿಯ ರಕ್ತಲೇಪನ ಸಂಗ್ರಹ ಅಭಿಯಾನ, ದೃಡಪಟ್ಟ ಪ್ರಕರಣಕ್ಕೆ ಸ್ಥಳದಲ್ಲಿಯೇ
ಶೀಘ್ರ ಚಿಕಿತ್ಸೆ ನೀಡಲಾಗುತ್ತಿದೆ.

ಈಗಾಗಲೇ ಆರೋಗ್ಯ ಇಲಾಖೆಯಿಂದ ಸೊಳ್ಳೆ ಉತ್ಪತ್ತಿ ತಾಣಗಳ ಪತ್ತೆ ಹಾಗೂ ಲಾರ್ವಾಗಳ ನಾಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಚಟುವಟಿಕೆ ಜಾರಿಯಲಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ
ಕಾಳಜಿಯಿಂದ ಕಾರ್ಯಕ್ರಮವನ್ನು ನಡೆಸಿಕೊಂಡು
ಬರಲಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯ ನಡೆಯುತ್ತಲಿದೆ.

ವಿಶೇ಼ಷವಾಗಿ ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ ಕೀಟಜನ್ಯ ರೋಗಗಳ ಶೀಘ್ರ ಪತ್ತೆಗೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಅನುಕೂಲವಾಗುವಂತೆ ವಿಶೇಷ ನಿಯಂತ್ರಣ
ತಂಡಗಳನ್ನು ರಚಿಸಿ ಕಾರ‍್ಯಚಟುವಟಿಕೆಗಳನ್ನು
ನಡೆಸಲಾಗುತ್ತಿದೆ. ನಿಯಂತ್ರಣಾ ಕ್ರಮವಾಗಿ ಜ್ವರ ಸಮೀಕ್ಷಾ ಕಾರ‍್ಯ, ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಕಾರ‍್ಯ,
ಹೊರಾಂಗಣ/ಒಳಾಂಗಣ ಧೂಮೀಕರಣವನ್ನು ವ್ಯವಸ್ಥಿತವಾಗಿ ಸಮಸ್ಯಾತ್ಮಕ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ.

ಈ ಹಿಂದಿನ ವರ್ಷಗಳಲ್ಲಿ ಮಲ್ಪೆ ಬಂದರು ಪ್ರದೇಶ ಹಾಗೂ ನಗರಸಭಾ ವ್ಯಾಪ್ತಿಯ ಪ್ರದೇಶಗಳ ಸುತ್ತ ಮುತ್ತ ಹೆಚ್ಚಿನ ಮಲೇರಿಯಾ ಹಾಗೂ ಡೆಂಗ್ಯೂ ಪ್ರಕರಣಗಳ ವರದಿಯ ಹಿನ್ನಲೆ, ಸದ್ರಿ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಆರೋಗ್ಯ ಇಲಾಖೆ, ನಗರಸಭೆ ಹಾಗೂ ಮೀನುಗಾರಿಕಾ ಇಲಾಖೆಗಳ ಸಮನ್ವಯದೊಂದಿಗೆ
ಸೊಳ್ಳೆಗಳ ನಿಯಂತ್ರಣ, ತ್ವರಿತ ರೋಗ ಪತ್ತೆ ಹಾಗೂ ಚಿಕಿತ್ಸೆ, ನಿಂತ ನೀರಿನ ಸೂಕ್ತ ವಿಲೇವಾರಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಮಲೇರಿಯಾ ಪ್ರಕರಣಗಳ ಮೇಲೆ ಹಿಡಿತ ಸಾಧಿಸುವತ್ತ ಮುನ್ನುಗ್ಗುತ್ತಿದೆ. ಈ ನಿಟ್ಟಿನಲ್ಲಿ ಸದ್ರಿ ರೋಗದ
ನಿಯಂತ್ರಣಾ ಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ.

ಜಿಲ್ಲೆಯಿಂದ ಹೆಚ್ಚಿನ ಕೆಲಸಕ್ಕಾಗಿ ಇತರೇ ಜಿಲ್ಲೆಗಳಿಗೆ ವಲಸೆ ಹೋಗಿ ಕೆಲಸ ಮಾಡುತ್ತಿರುವ ನಾಗರಿಕರು, ಡೆಂಗ್ಯೂ ಹಾಗೂ ಇತರೇ ಜ್ವರಗಳೊಂದಿಗೆ ವಿಶ್ರಾಂತಿ ಹಾಗೂ ಚಿಕಿತ್ಸೆಗಾಗಿ ಊರಿಗೆ ಮರಳುವುದರಿಂದ ಅಂತಹ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾವಹಿಸಿ ಜಿಲ್ಲೆಯಲ್ಲಿ ರೋಗ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ
ವಹಿಸುವಂತೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಣ ಮಾಡಲು ಆರೋಗ್ಯ ಇಲಾಖೆಯ ಎಲ್ಲಾ ಅಧೀನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿರುತ್ತದೆ.

ಮಳೆಗಾಲದ ಯಾವುದೇ ಸಾಂಕ್ರಾಮಿಕ ರೋಗಗಳನ್ನು
ಶೀಘ್ರವಾಗಿ ಪತ್ತೆ ಹಚ್ಚಲು ಹಾಗೂ ಸಂಪೂರ್ಣ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಲ್ಲಿ ಟೆಸ್ಟ್ ಕಿಟ್‌ಗಳು, ಔಷದಿ, ರಾಸಾಯನಿಕಗಳು ಹಾಗೂ ಉಪಕರಣಗಳು ಸುಸ್ಥಿತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಇರುತ್ತದೆ.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಾರ್ವಜನಿಕರು
ವಹಿಸಬೇಕಾದ ಅಗತ್ಯ ಕ್ರಮಗಳು:
ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳು ಹತೋಟಿಯಲ್ಲಿದ್ದು ಜನರು ಆತಂಕ ಪಡುವ ಅಗತ್ಯವಿಲ್ಲ. ಅದಾಗ್ಯೂ ಸಾಮಾನ್ಯ ಜ್ವರ ಅಥವಾ ಇನ್ನಿತರ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸದೇ
ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆದುಕೊಳ್ಳಬೇಕು.

ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು ಅಲ್ಲಲ್ಲಿ ನೀರು ಸಂಗ್ರಹಿಸಲ್ಪಡುವುದರಿಂದ ಸೊಳ್ಳೆ ಉತ್ಪತ್ತಿ
ತಾಣಗಳು ಜಾಸ್ತಿಯಾಗಿ ಮಲೇರಿಯಾ ಹಾಗೂ ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿವೆ. ಆದುದರಿಂದ ಸಾರ್ವಜನಿಕರು ಮನೆಯ ಸುತ್ತ ಮುತ್ತ, ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಿಯೂ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಮುಂಜಾಗ್ರತೆ ವಹಿಸಬೇಕು.

ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್‌ ಕೂಲರ್‌ ಇತ್ಯಾದಿಗಳನ್ನು ಕನಿಷ್ಟ ಪಕ್ಷ ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ, ನಂತರ ನೀರು ತುಂಬಿಸಿ ಭದ್ರವಾಗಿ ಮುಚ್ಚಿಡಬೇಕು.ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟೈರ್, ಎಳೆನೀರಿನ ಚಿಪ್ಪು, ಒಡೆದ
ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ನೀರು ಸಂಗ್ರಹವಾದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ಸೊಳ್ಳೆಗಳ ಕಚ್ಚುವಿಕೆಯಿಂದ ಮಲೇರಿಯಾ ಹಾಗೂ ಡೆಂಗ್ಯೂ ರೋಗಗಳು ಹರಡುವುದರಿಂದ ರೋಗದಿಂದ ದೂರವಿರಲು ಹೊರಾಂಗಣದಲ್ಲಿ ಮಲಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು, ವಿಶ್ರಾಂತಿ ಪಡೆಯುವಾಗ ಮತ್ತು ಮಲಗುವಾಗ ವಿಶೇಷವಾಗಿ
ಗರ್ಭಿಣಿಯರು, ವಯಸ್ಕರು ಮತ್ತು ಮಕ್ಕಳು ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು.ಸೊಳ್ಳೆಗಳು ಪ್ರವೇಶಿಸದಂತೆ ಮನೆಯ ಕಿಟಕಿ ಬಾಗಿಲುಗಳಿಗೆ ಜಾಲರಿ
ಅಳವಡಿಸುವುದು ಜೊತೆಗೆ ಸಾಧ್ಯವಾದಷ್ಟು ಮೈ ಮುಚ್ಚುವಂತೆ ಬಟ್ಟೆಯನ್ನು ಧರಿಸಬೇಕು. ಸೊಳ್ಳೆ ಕಚ್ಚದಂತೆ ಎಲ್ಲಾ ರೀತಿಯ ಸ್ವಯಂ ರಕ್ಷಣಾ ವಿಧಾನಗಳನ್ನು ಸಾರ್ವಜನಿಕರು ಅನುಸರಿಸುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.