ಸ್ವಾತಂತ್ರ್ಯ ದಿನ ಧ್ವಜಾರೋಹಣ ಮಾಡುವ ಮುನ್ನ ಈ ಸಂಗತಿಗಳು ನೆನಪಿರಲಿ..

ಮತ್ತೆ ಬಂದಿದೆ ಸ್ವಾತಂತ್ರ್ಯ ದಿನ. ಈ ದಿನ ರಾಷ್ಟ್ರಧ್ವಜವನ್ನು ಹಾರಿಸುವ ಮುನ್ನ ಭಾರತದಲ್ಲಿ ಧ್ವಜ ಸಂಹಿತೆಯ ಅಡಿಯಲ್ಲಿ ಯಾವೆಲ್ಲ ನಿಯಮಗಳಿವೆ ಎನ್ನುವುದನ್ನು ತಿಳಿದುಕೊಳ್ಳುವುದು ಅತೀ ಮುಖ್ಯ.

ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಭಾರತ ತ್ರಿವರ್ಣ ಧ್ವಜವನ್ನು ಹಾರಿಸಿ ಗೌರವ ವಂದನೆ ಸಲ್ಲಿಸಲಾಗುತ್ತದೆ. ನೀವು ಕೂಡ ಈ ವರ್ಷ ಭಾರತದ ಬಾವುಟ ಹಾರಿಸಬೇಕು ಎಂದುಕೊಂಡಿದ್ದರೆ ಅದಕ್ಕೂ ಮುನ್ನ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅರಿಯಲೇಬೇಕು. ಭಾರತೀಯನು ತನ್ನ ಮನೆಯಲ್ಲಿ ಧ್ವಜಾರೋಹಣ ಮಾಡಬಹುದು ಎಂಬ ಹಕ್ಕನ್ನು ನೀಡಲಾಗಿದೆ. ಕೇಂದ್ರ ಸರ್ಕಾರವು 2002ರಲ್ಲಿ ಭಾರತದ ಧ್ವಜ ಸಂಹಿತೆಯಲ್ಲಿ ತಿದ್ದುಪಡಿ ಮಾಡಲು ಆದೇಶವನ್ನು ನೀಡಿತ್ತು.

ಇದಾದ ಬಳಿಕ ಅಂದರೆ 2021ರ ಡಿಸೆಂಬರ್ 30ರಂದು ಭಾರತ ಧ್ವಜ ಸಂಹಿತೆಯಲ್ಲಿ ಮತ್ತೊಂದು ಬದಲಾವಣೆ ಮಾಡಿತು. ಯಂತ್ರಗಳಿಂದ ಮಾಡಲ್ಪಟ್ಟ ಅಥವಾ ಪಾಲಿಸ್ಟರ್ ಬಟ್ಟೆಗಳಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ಹಾರಿಸಲು ಅವಕಾಶ ನೀಡಲಾಯಿತು. ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜದ ಘನತೆ ಹಾಗೂ ಗೌರವಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಎಲ್ಲಾ ದಿನಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶ ನೀಡಲಾಗಿದೆ.

ರಾಷ್ಟ್ರಧ್ವಜವು ಆಯತಾಕಾರದಲ್ಲಿಯೇ ಇರಬೇಕು. ಧ್ವಜದ ಗಾತ್ರ ಯಾವುದೇ ಇರಬಹುದು. ಆದರೆ ಎತ್ತರ ಹಾಗೂ ಉದ್ದದ ನಡುವಿನ ಅನುಪಾತವು 3:2 ಆಗಿರುವುದು ಕಡ್ಡಾಯ. ರಾಷ್ಟ್ರಧ್ವಜವನ್ನು ಯಾವುದೇ ಸಮಯದಲ್ಲಿ ಪ್ರದರ್ಶಿಸುವಾಗಲೂ ಅದರ ಘನತೆ ಹಾಗೂ ಗೌರವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯುಂಟಾಗಬಾರದು ಹಾಗೂ ರಾಷ್ಟ್ರಧ್ವಜ ಸ್ಪಷ್ಟವಾಗಿ ಗೋಚರವಾಗುವಂತೆಯೇ ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೂ ಹರಿದು ಹೋದ, ಕೊಳೆಯಾದ ರಾಷ್ಟ್ರಧ್ವಜ ಪ್ರದರ್ಶಿಸುವಂತಿಲ್ಲ.

ಭಾರತದ ತ್ರಿವರ್ಣ ಧ್ವಜಕ್ಕೆ ಸಮನಾದ ಎತ್ತರಕ್ಕೆ ಇನ್ನಿತರ ಯಾವುದೇ ಧ್ವಜವನ್ನೂ ಹಾರಿಸುವಂತಿಲ್ಲ. ಏಕಕಾಲದಲ್ಲಿ ಭಾರತದ ತ್ರಿವರ್ಣ ಧ್ವಜದ ಜೊತೆಯಲ್ಲಿ ಮತ್ತೊಂದು ಧ್ವಜ ಹಾರಿಸಲು ಅವಕಾಶವಿಲ್ಲ. ಧ್ವಜ ಸಂಹಿತೆಯ ಭಾಗ III ರ ವಿಭಾಗ IX ರಲ್ಲಿ ತಿಳಿಸಿರುವಂತೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮುಂತಾದ ಗಣ್ಯರನ್ನು ಹೊರತುಪಡಿಸಿ ಇನ್ನಿತರ ಯಾರದ್ದೇ ವಾಹನದ ಮೇಲೂ ಧ್ವಜವನ್ನು ಹಾರಿಸಬಾರದು. ಇವಿಷ್ಟು ರಾಷ್ಟ್ರಧ್ವಜ ಹಾರಿಸುವಾಗ ಗಮನದಲ್ಲಿಡಬೇಕಾದ ಸಂಗತಿಗಳು.