ಉಡುಪಿ: ಗ್ಯಾಸ್ ಸಿಲಿಂಡರ್ ತುಂಬಿದ್ದ ಮಹೀಂದ್ರಾ ಪಿಕಪ್ ಹಾಗೂ ಆಟೋರಿಕ್ಷಾ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಸಂತೆಕಟ್ಟೆ ಬಳಿಯ ಆಶೀರ್ವಾದ ಜಂಕ್ಷನ್ ಬಳಿ ಇಂದು ನಡೆದಿದೆ.
ಘಟನೆ ನಡೆದು ಸಾಕಷ್ಟು ಹೊತ್ತಾದರೂ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದೆ ಬಂದಿಲ್ಲ. ಅದೇ ಮಾರ್ಗವಾಗಿ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಮಲ್ಪೆಯ ಬ್ರದರ್ಸ್ ಟೂರಿಸ್ಟ್ ಬಸ್ ಚಾಲಕ ಬುರ್ಹಾನ್ ಮಲ್ಪೆ ಹಾಗೂ ನವೀನ್ ಹನುಮಾನ್ ನಗರ ಅವರು ಬಸ್ ನ್ನು ನಿಲ್ಲಿಸಿ ವಿಚಾರಿಸಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಟೋ ಚಾಲಕನನ್ನು ತಮ್ಮ ಟೂರಿಸ್ಟ್ ಬಸ್ ನಲ್ಲಿ ಕರೆದೊಯ್ದು, ನೇರವಾಗಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯ ಒಳಗಡೆ ಬಸ್ ನ್ನು ತೆಗೆದುಕೊಂಡು ಹೋಗಿ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗಾಯಾಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಈಶ್ವರ್ ಮಲ್ಪೆ ಮತ್ತು ತಂಡ ಸಹಕರಿಸಿದೆ.