ಆ.15ರಂದು ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ನ ಆನ್ ಲೈನ್ ವ್ಯಾಸಂಗ- ಸಮಾಲೋಚನೆ ಕೋರ್ಸ್ ಗಳ ಉದ್ಘಾಟನೆ

ಐಐಟಿ ಮದ್ರಾಸ್ ಪ್ರವರ್ತಕ್ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ 20 ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ತರಗತಿಗಳನ್ನ ನಡೆಸಿಕೊಡುವ ಯೋಜನೆ ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ. ಈ ತರಗತಿಗಳು ಆನ್ಲೈನ್ ಲೈವ್ ಮೂಲಕ ನಡೆಯಲಿದ್ದು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಐಐಟಿ ಯಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಪ್ರಾರಂಭಿಸಿದ್ದೇನೆ ಎಂದು ಉದ್ಯಮಿ ಡಾ. ಎಚ್.ಎಸ್. ಶೆಟ್ಟಿ ಹೇಳಿದರು.

ಉಡುಪಿಯ ಪತ್ರಿಕಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ 20 ಸರಕಾರಿ ಹೈಸ್ಕೂಲ್ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಗಲಿರುವ ಆನ್‌ಲೈನ್ ವ್ಯಾಸಂಗ ಮತ್ತು ಸಮಾಲೋಚನೆ ಕೋರ್ಸ್ ಗಳ ಉದ್ಘಾಟನೆ ಇದೇ ಆಗಸ್ಟ್ 15ರಂದು ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಲಿದೆ ಎಂದರು.

ಪ್ರಸಕ್ತ 2024-25ನೇ ಸಾಲಿನಲ್ಲಿ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಐ.ಐ.ಟಿ. ಮದ್ರಾಸ್ ಅವರ ಸಹಯೋಗದೊಂದಿಗೆ ಆನ್‌ಲೈನ್ ತರಬೇತಿ ಮತ್ತು ಕೌನ್ಸಿಲಿಂಗ್ ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಯ ವಿವಿಧ ಸರಕಾರಿ ಹೈಸ್ಕೂಲ್ ಮತ್ತು ಸದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿ, ಇದನ್ನು ಕರಾವಳಿಯ ಎಲ್ಲಾ 150 ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ವಿಸ್ತರಿಸಲಾಗುವುದು ಎಂದರು.

ಸಮಾರಂಭವನ್ನು ಚೆನ್ನೈ ಐ.ಐ.ಟಿ- ಮದ್ರಾಸ್ ಪ್ರವರ್ತಕ ಟೆಕ್ನಾಲಜಿ ಫೌಂಡೇಶನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಶಂಕರ ರಾಮನ್ ಉದ್ಘಾಟಿಸಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಎನ್.ಪ್ರಕಾಶ್, ಉಡುಪಿ ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಮಾರುತಿ, ಡಿಡಿಪಿಐ ಕೆ.ಗಣಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಿ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ನಾಗರಾಜ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.