ಉಡುಪಿ: ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಅನಂತರ ನೆರೆ ಹಾವಳಿ ಇತ್ಯಾದಿ ಹಲವಾರು ಪ್ರತಿಕೂಲ ಕಾರಣಗಳಿಂದ ಸಂಪುಟ ವಿಸ್ತರಣೆ ಮಾಡಲಾಗದಿದ್ದರೂ ಇಂದು ಉತ್ತರಕರ್ನಾಟಕದಲ್ಲಿ ಭೀಕರ ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ಪರಿಹಾರ ಕಾರ್ಯಾಚರಣೆ ನಡೆಸುವಲ್ಲಿ ಯಾವುದೇ ತೊಡಕಾಗಿಲ್ಲ. ಈಗಾಗಲೇ ಮೂರು ದಿನಗಳಿಂದ ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನೆರೆ ಪೀಡಿತ
ಪ್ರದೇಶಗಳಲ್ಲಿ ಬೀಡು ಬಿಟ್ಟು ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮತ್ತು ಪರಿಹಾರ ಕಾರ್ಯಾಚರಣೆಗಾಗಿಯೇ ಶಾಸಕರುಗಳ ನಿಯೋಗವನ್ನು ರಚಿಸಿ ಅವರಿಗೆ ಸೂಕ್ತ ಕಾರ್ಯಾಚರಣೆ ನಡೆಸುವಂತೆ ಆದೇಶಗಳನ್ನು ನೀಡಿದ್ದಾರೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಕಿನ್ನಿಮೂಲ್ಕಿ ವೀರಭದ್ರ ಕಲಾ ಭವನದಲ್ಲಿ ಜಿಲ್ಲಾಡಳಿತ ಉಡುಪಿ, ರೋಟರಿ ಕ್ಲಬ್ ಉಡುಪಿ ರಾಯಲ್, ಮಣಿಪಾಲ ಹಿಲ್ಸ್, ಹಂಗಾರಕಟ್ಟೆ, ರೋಟರಾಕ್ಟ್ ಕ್ಲಬ್ ಮಣಿಪಾಲ ಮತ್ತು ಜಿಲ್ಲೆಯ ಇತರ ಸಾರ್ವಜನಿಕ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲೆಯಿಂದ ಅಗತ್ಯ ವಸ್ತುಗಳನ್ನು ತಲುಪಿಸಲು ಉಡುಪಿಯ
ಉದ್ಯಮಿ ರಾಜೇವ ಶೆಟ್ಟಿಗಾರ್ ರವರಿಂದ ಹೊಸ ಬಟ್ಟೆಗಳನ್ನು ಜಿಲ್ಲಾಡಳಿತದ ಪರವಾಗಿ ಸ್ವೀಕರಿಸಿ ಉಡುಪಿಯ ಸಂಗ್ರಹ ಕೇಂದ್ರಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂಸದರಾದ ಶೋಭಾ ಕರಂದ್ಲಾಜೆ ಅವರೂ ಕೂಡ ರಾಜ್ಯದ ನೆರೆ ಪೀಡಿತ ಪ್ರದೇಶಗಳ ವಿಶೇಷ ಪ್ರತಿನಿಧಿಯಾಗಿ
ಕಾರ್ಯ ನಿರ್ವಹಿಸುತ್ತಿದ್ದು ಎಲ್ಲ ಪ್ರದೇಶಗಳಲ್ಲಿ ಓಡಾಡಿ ಅಲ್ಲಿನ ಪರಿಹಾರ ಕಾರ್ಯದ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು. ಅಭಿಯಾನದ ಪ್ರಮುಖ ಸಂಚಾಲಕ ಬಾಲಕೃಷ್ಣ ಮದ್ದೋಡಿಯವರು ಮಾತನಾಡಿ, ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ತಮ್ಮ ಸ್ಥಳೀಯ ಪ್ರದೇಶಗಳಲ್ಲಿ ವಸ್ತುಗಳನ್ನು ಸಂಗ್ರಹಿಸಿ ಮುಂದಿನ ಮಂಗಳವಾರದ ಒಳಗೆ ತಂದು ಕೊಟ್ಟಲ್ಲಿ ಅದನ್ನು ಜಿಲ್ಲಾಡಳಿತ ಮೂಲಕ ನೆರೆ ಪೀಡಿತ ಪ್ರದೇಶಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಮತ್ತು ಮಣಿಪಾಲ ಖಾಸಗಿ ಸಂಸ್ಥೆ ಶ್ರೀ ಸಾಯಿ ಲಾಜಿಸ್ಟಿಕ್ ನ ಮಾಲಕ ಪ್ರವೀಣ್ ಪೂಜಾರಿ ಹಿರೇಬೆಟ್ಟು ಅವರು ಈ ವಸ್ತುಗಳನ್ನು ಉಚಿತವಾಗಿ ತಲುಪಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ರಶ್ಮಿ ಭಟ್, ವಿವಿಧ ಸಂಸ್ಥೆಗಳ ಸಂಚಾಲಕರುಗಳಾದ ರತ್ನಾಕರ್ ಇಂದ್ರಾಳಿ, ಬಾಲಕೃಷ್ಣ ಕುಮಾರ್, ವಿಶ್ವನಾಥ್ ರಾವ್, ಜಯಪ್ರಕಾಶ್ ಕೆದ್ಲಾಯ, ದಿನೇಶ್ ಹೆಗ್ಡೆ ಅತ್ರಾಡಿ, ವಿದ್ಯಾ ಚರಣ್ ಶೆಟ್ಟಿಗಾರ್,
ಗೋವರ್ಧನ್ ಶೆಟ್ಟಿಗಾರ್, ಫೌಜಾನ ಅಕ್ರಮ್, ಅಶ್ವಥ್ ಆಚಾರ್ಯ, ಬಾಲಗಂಗಾಧರ್ ರಾವ್, ಮಹಮ್ಮದ್ ಮೌಲಾ, ಉದ್ಯಮಿ ದಾವೂದ್ ಅಬೂಬಕರ್, ಗುರುಪ್ರಸಾದ್ ಪಾಲನ್, ವಿಜಯ ಕುಮಾರ್, ದಿವ್ಯ ಶೆಟ್ಟಿ, ಜ್ಯೋತಿ ಕೃಷ್ಣ ಮೂರ್ತಿ, ರೇಷ್ಮಾ ಹಾಜರಿದ್ದರು.
ಯಶವಂತ್ ಬಿ. ಕೆ.ಮತ್ತು ಮಂಜುನಾಥ್ ಮಣಿಪಾಲ ಕಾರ್ಯಕ್ರಮ ಸಂಯೋಜಿಸಿದರು.












