ಚಿಕ್ಕಮಗಳೂರು: ಸತತ ಪ್ರವಾಹದಿಂದಾಗಿ ಕುಗ್ಗಿ ಹೋಗಿರುವ ಬೆಂಗಳೂರು- ಮಂಗಳೂರು ನಡುವಿನ 3 ಪ್ರಮುಖ ಸಂಪರ್ಕ ರಸ್ತೆಗಳು ಹಾಗೂ ರೈಲು ಮಾರ್ಗವೂ ಕೂಡ ಶುಕ್ರವಾರ ಸಂಪೂರ್ಣ ಬಂದ್ ಆಗಿದೆ.
ಇದೀಗ ಮಂಗಳೂರು-ಬೆಂಗಳೂರನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗವೆಂದರೆ ಕಾರ್ಕಳದ ಬಜೆಗೋಳಿ- ಶೃಂಗೇರಿ ಮಾರ್ಗವಾಗಿ ಸಾಗುವ ಎಸ್.ಕೆ.ಬಾರ್ಡರ್. ಆದರೆ ಇಲ್ಲೂ ಕೂಡ ಮಳೆಯ ಅಬ್ಬರ ಜಾಸ್ತಿಯಾಗಿದ್ದು ಯಾವಾಗ ಬೇಕಾದರೂ ಸಂಚಾರ ದುಸ್ತರವಾಗುವ ಸಾಧ್ಯತೆ ಇದೆ.
ಸಕಲೇಶಪುರದ ದೋಣಿಗಲ್ ಬಳಿ ಸಂಭವಿಸಿದ ಭೂಕುಸಿತದಿಂದಾಗಿ ಸಂಜೆಯೇ ವಾಹನ ಸಂಚಾರ ಬಂದ್ ಆಗಿತ್ತು. ಹಾಸನ ಜಿಲ್ಲಾಡಳಿತವು ಈ ಮಾರ್ಗದಲ್ಲಿ ಆ.12ರ ವರೆಗೆ ವಾಹನ ಸಂಚಾರ ನಿಷೇಧಿಸಿದೆ. ಉಳಿದಂತೆ ಚಾರ್ಮಾಡಿ ಫಾಟಿಯಲ್ಲಿಯೂ ವಿಪರೀತ ಭೂಕುಸಿತದಿಂದಾಗಿ ಆ.14 ರ ವರೆಗೆ ನಿಷೇಧ ಘೋಷಿಸಲಾಗಿದೆ.
ಕೊಡಗಿನ ಮೂಲಕ ಬೆಂಗಳೂರು ತಲುಪಲು ಇದ್ದ ಪ್ರಮುಖ ರಸ್ತೆಯಾದ ಮಾಣಿ- ಮೈಸೂರು ರಸ್ತೆ ಹಾದು ಹೋಗುವ ಪಿರಿಯಾಪಟ್ಟಣ- ಕುಶಾಲನಗರ ಸಮೀಪ ಕಾವೇರಿ ನದಿ ಮೂರು ಅಡಿ ಎತ್ತರಕ್ಕೆ ಹರಿಯುತ್ತಿದ್ದು, ಈ ಮಾರ್ಗದಲ್ಲೂ ಸಂಚಾರ ಸ್ಥಗಿತಗೊಳಿಸಲಾಗಿದೆ. ಭೂಕುಸಿತದಿಂದಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರವನ್ನು ಈಗಾಗಲೇ ರದ್ದುಗೊಳಿಸಲಾಗಿದೆ.
ಸದ್ಯಕ್ಕೆ ಉಡುಪಿ- ಮಾರ್ಗವಾಗಿ ಸಂಚರಿಸಬಹುದಾದರೂ ಬೆಂಗಳೂರು ತಲುಪಲು 18 ಗಂಟೆ ಬೇಕಾಗುತ್ತದೆ. ಇನ್ನು ವಾಯು ಮಾರ್ಗದಲ್ಲಿ ಬೆಂಗಳೂರು ಸೇರಬಹುದೆಂದರೆ ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಿನಿಂದ ವಿಮಾನಯಾನವೂ ಕೂಡ ಸತತ ಮಳೆಯಿಂದ ಅಡೆತಡೆ ಕಂಡಿದೆ.