ಉಡುಪಿ: ಉಡುಪಿ ಜಿಲ್ಲಾ ಸವಿತಾ ಸಮಾಜದ ಆಶ್ರಯದಲ್ಲಿ ಸವಿತಾ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ‘ವಿದ್ಯಾ ಪ್ರತಿಭಾ ಪುರಸ್ಕಾರ’, ಸವಿತಾ ಸ್ವಚ್ಛ ಸೆಲೂನ್ ಜಿಲ್ಲಾ ಪ್ರಶಸ್ತಿ’ ಹಾಗೂ ‘ಸವಿತಾ ಹಿರಿಯ ವೃತ್ತಿ ಭಾಂದವ ಜಿಲ್ಲಾ ಪ್ರಶಸ್ತಿ’ ಪ್ರಧಾನ ಸಮಾರಂಭವು ಅಂಬಲಪಾಡಿ ಸವಿತಾ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರಕೂರಿನ ಮಾಜಿ ಆಡಳಿತ ಮೊಕ್ತೇಸರ ವಿಶ್ವನಾಥ್ ಭಂಡಾರಿ ಅವರು, 80ರ ದಶಕದಲ್ಲಿ ಸಂಘಟನೆ ಆರಂಭಿಸಲು ಸಂಕಲ್ಪ ಮಾಡಿದ್ದು, ಅಂದಿನಿಂದ ಇಂದು ಎಲ್ಲರ ಸಹಕಾರದಿಂದ ಜಿಲ್ಲಾ ಸವಿತಾ ಸಮಾಜವು ಉತ್ತಮ ಸಮಾಜ ನಿರ್ಮಾಣಕ್ಕೆೆ ಕಾರ್ಯನಿರ್ವಹಿಸುತ್ತಿದೆ.

ಸಮಾಜ ನಮಗೆ ಏನು ಮಾಡಿದೆ ಎಂಬುವುದಕ್ಕಿಂತ ನಾವು ಸಮಾಜಕ್ಕೆೆ ಏನು ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಸಮಾಜದ ವಿದ್ಯಾಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಹಿರಿಯರನ್ನು ಗುರುತಿಸಿ ಗೌರವಿಸುವುದು ಸಂಘಟನೆಗಳ ಉತ್ತಮ ಗುಣಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ 75 ವರ್ಷ ಮೇಲ್ಪಟ್ಟ ಸವಿತಾ ಸಮಾಜದ ಕ್ಷೌರಿಕ ವೃತ್ತಿ ನಿರತ ಬಂಧುಗಳಿಗೆ ಸವಿತಾ ಹಿರಿಯ ವೃತ್ತಿ ಭಾಂದವ ಜಿಲ್ಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. 14 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರು ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಉಡುಪಿ ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಶಂಕರ್ ಸಾಲಿಯಾನ್ ಕಟಪಾಡಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.













