ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಉಡುಪಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಗೆ ಕಾರ್ಕಳ ತಾಲೂಕಿನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯ ಕುಂಟಲ್ಪಾಡಿ ಸಮೀಪದಲ್ಲಿ ಪರ್ಪಲೆ ಗುಡ್ಡ ಕುಸಿದಿದ್ದು, ರಾಜ್ಯ ಹೆದ್ದಾರಿಯಲ್ಲಿ ಬಿರುಕು ಬಿದ್ದಿದೆ. ರಸ್ತೆ ಮಧ್ಯೆ ಕಂದಕ ನಿರ್ಮಾಣಗೊಂಡು ರಸ್ತೆ ಮಧ್ಯೆ ವಿಪರೀತ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

Oplus_0

ನಿಟ್ಟೆ ಗ್ರಾಮದ ಅತ್ತೂರು ಚರ್ಚ್ ರಸ್ತೆಯ ವಿಕ್ಟರ್ ಫರ್ನಾಂಡಿಸ್‌ ಎಂಬವರ ಮನೆಯ ಹಿಂಭಾಗದಲ್ಲಿ ಮತ್ತು ನಿಟ್ಟೆ ಲೆಮಿನ ಫ್ಯಾಕ್ಟರಿ ಬಳಿ ಗುಡ್ಡ ಕುಸಿದಿದ್ದು, ಅಪಾರ ನಷ್ಟ ಉಂಟಾಗಿದೆ. ಬೋಳ ಗ್ರಾಮದ ಕಟ್ಟಿಂಗೇರಿಯಲ್ಲಿ ರಸ್ತೆ ಬದಿ ಹಾಗೂ ಬೆಳ್ಳಣ್ ಗ್ರಾಮದ ಇಂದಾರು ಎಂಬಲ್ಲಿನ ಡೈಮಂಡ್‌ ಹಿಲ್ ಅಪಾರ್ಟೆಂಟ್ ಬಳಿ ಗುಡ್ಡ ಜರಿದಿದೆ. ಹಿರ್ಗಾನ ಗ್ರಾಮದ ವಿಶಾಲಾಕ್ಷಿ ಶೆಟ್ಟಿಯವರ ಮನೆಗೆ ಹಾನಿಯಾಗಿದ್ದು 8000 ರೂ. ನಷ್ಟ ಸಂಭವಿಸಿದೆ. ಕಲ್ಯಾ ಗ್ರಾಮದ ಅಪ್ಪಿ ಮೊಯಿಲಿಯವರ ಮನೆ ಹಾನಿಗೊಳಗಾಗಿ 40 ಸಾ. ರೂ. ನಷ್ಟ ಸಂಭವಿಸಿದೆ.