ವಯನಾಡು ಭೂಕುಸಿತ; ಖೇದ ವ್ಯಕ್ತಪಡಿಸಿದ ವಿಧಾನಸಭಾ ಸ್ಪೀಕರ್ ಯುಟಿ ಖಾದರ್

ಉಡುಪಿ: ಕೇರಳ ವಯನಾಡು ಭೂಕುಸಿತಕ್ಕೆ ಖೇದ ವ್ಯಕ್ತಪಡಿಸಿದ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು, ಈ ರೀತಿ ಕೂಡ ಪ್ರಕೃತಿ ಮುನಿಸಿಕೊಳ್ಳುತ್ತಾ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜೀವಮಾನದಲ್ಲೇ ಪ್ರಥಮ ಬಾರಿಗೆ ಇಂಥ ದುರ್ಘಟನೆ ನೋಡಿದ್ದೇನೆ. ನನಗೆ ಅತ್ಯಂತ ನೋವಾಗಿದೆ. ಪ್ರಕೃತಿ ವಿಕೋಪ ದೇವರ ಸೃಷ್ಟಿ, ಅದನ್ನು ತಡೆಯಲು ನಮಗೆ ಸಾಧ್ಯವಿಲ್ಲ. ಜನರು ಪ್ರಯತ್ನ ಪಟ್ಟರೆ ಇಂತಹ ದುರ್ಘಟನೆಗಳನ್ನು ತಡೆಗಟ್ಟಬಹುದು ಎಂದರು.

ಮಾನವರ ತಪ್ಪಿನಿಂದ ಆಗುವ ದುರ್ಘಟನೆಗಳನ್ನು ತಪ್ಪಿಸಬಹುದು. ಈ ಬಗ್ಗೆ ಜನರು, ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಎಚ್ಚೆತ್ತುಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ದುರ್ಘಟನೆ ತಪ್ಪಿಸಲು ಸರಕಾರ ಕೆಲ ನಿಯಮಗಳನ್ನು ಮಾಡಬೇಕಾಗುತ್ತದೆ. ಸರ್ಕಾರ ನಿಯಮ ಮಾಡಿದ್ದನ್ನು ಜನರು ಅನುಸರಿಸಬೇಕು. ಈ ಭೂಮಿ ಕೇವಲ ನಮ್ಮ ಸ್ವತ್ತಲ್ಲ. ಇನ್ನೂ ಹುಟ್ಟಿ ಬೆಳೆಯಲು ಕೋಟ್ಯಾಂತರ ಜನರು ಬಾಕಿ ಇದ್ದಾರೆ. ಭವಿಷ್ಯದ ಜನಾಂಗಕ್ಕೆ ಉತ್ತಮ ಭೂಮಿಯನ್ನು ಬಿಟ್ಟು ಹೋಗಬೇಕು. ಮಣ್ಣಿನ ಗುಣಕ್ಕೆ ವಿರುದ್ಧವಾಗಿ ಕಟ್ಟಡ ಕಟ್ಟಬಾರದು. ಎತ್ತರದಲ್ಲಿ ಕಟ್ಟಡ ಕಟ್ಟುವವನಿಗೆ ಕೆಳಗೆ ಇರುವ ಜನರ ಬಗ್ಗೆ ಗೊತ್ತಿರುವುದಿಲ್ಲ. ಕೆಳಗೆ ಮನೆ ಕಟ್ಟುವವರಿಗೆ ಎತ್ತರದ ಕಟ್ಟಡಗಳ ಮಾಹಿತಿ ಇರುವುದಿಲ್ಲ. ನೀರು ಎಲ್ಲಿ ಹರಿಯುತ್ತೆ ಅನ್ನೋದೇ ಗೊತ್ತಿರುವುದಿಲ್ಲ. ಭೂಮಿಗೆ ಬಿದ್ದ ನೀರು ಹರಿದು ಹೋಗಬೇಕು. ಸಂಗ್ರಹವಾದ ನೀರು ಭಾರ ಆದಾಗ ಈ ರೀತಿಯ ದುರ್ಘಟನೆ ಆಗುತ್ತೆ ಎಂದು ಹೇಳಿದರು.