ಕಟಪಾಡಿ:ತ್ರಿಶಾ ವಿದ್ಯಾ ಪಿಯು ಕಾಲೇಜಿನಲ್ಲಿ ಗುರುಪೂರ್ಣಿಮೆ ಮತ್ತು ಕಾರ್ಗಿಲ್ ವಿಜಯ್ ದಿನ ಆಚರಣೆ

ಕಟಪಾಡಿ: ದೇಶ ಸೇವೆ ಮಾಡುವುದು ಪುಣ್ಯದ ಕರ್ತವ್ಯ. ಹಗಲಿರುಳೆನ್ನದೇ ದೇಶದ ಗಡಿಯಲ್ಲಿ ಕಾಯುತ್ತಿರುವ ಸೈನಿಕರ ಪರಿಶ್ರಮದಿಂದ ನಾವೆಲ್ಲರೂ ಇಲ್ಲಿ ನೆಮ್ಮದಿಯಾಗಿದ್ದೇವೆ. ಅಂದು ಕೆಚ್ಚೆದೆಯಿಂದ ಹೋರಾಡಿದ ಸೈನಿಕರ ಫಲವಾಗಿ ಕಾರ್ಗಿಲ್ ನಲ್ಲಿ ವಿಜಯ ಸಿಕ್ಕಿದೆ. ನಾವಿಂದು ದೇಶದೊಳಗೆ ಈ ದೇಶಕ್ಕೆ ಪೂರಕವಾಗಿ ನಡೆದುಕೊಳ್ಳುವ ಅಗತ್ಯವಿದೆ ಎಂದು ಹವಾಲ್ದಾರ್ ಶುಭಕರ್ ಕಾಂಚನ್ ಹೇಳಿದರು. ಅವರು ಇತ್ತೀಚಿಗೆ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಮತ್ತು ಕಾರ್ಗಿಲ್ ವಿಜಯ್ ದಿವಸದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಮಾತನಾಡಿ ನಮ್ಮೊಳಗೆ ಶಿಸ್ತು ಮೌಲ್ಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಾಗ ಮಾತ್ರ ಈ ದೇಶದ ಸುಪ್ರಜೆಗಳಾಗುವುದಕ್ಕೆ ಸಾಧ್ಯ ಎಂದರು. ವೇದಿಕೆ ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಆನಂತ್ ಪೈ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.