ಉಡುಪಿ: ಕಳೆದ 8 ದಿನಗಳಿಂದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಕೊರಗ ಸಮುದಾಯದ ಮುಖಂಡರು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಕೊರಗ ಸಮುದಾಯದ ನ್ಯಾಯ ಸಮ್ಮತ ಬೇಡಿಕೆಗಳಾದ ಭೂಮಿ ಹಕ್ಕು ಹಾಗೂ ವಿದ್ಯಾವಂತ ಕೊರಗ ಸಮುದಾಯದ ಯುವ ಜನತೆಗೆ ಅರ್ಹ ಸರಕಾರಿ ಉದ್ಯೋಗದ ಒದಗಿಸುವ ಬಗ್ಗೆ ಈಗಾಗಲೇ ರಾಜ್ಯ ಸರಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿಯೇ ಕೊರಗ ಸಮುದಾಯದ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಆಗ್ರಹಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗಳು ಜಿಲ್ಲೆಯ ಕೊರಗ ಸಮುದಾಯದ ಗಂಭೀರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಸಂಬಂಧಿತ ಇಲಾಖೆಗೆ ಸೂಕ್ತ ವರದಿ ನೀಡುವಂತೆ ಶಾಸಕರು ಕೊರಗ ಸಮುದಾಯದ ಪರವಾಗಿ ಹೇಳಿದರು.ಕೊರಗ ಸಮುದಾಯದ ಮುಖಂಡರು ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕೊರಗ ಸಮುದಾಯದ ಮುಖಂಡರಾದ ಸುಶೀಲ, ಸಂಜೀವ, ಶೇಖರ್, ಬೊಗ್ರ, ಪವಿತ್ರ, ಐ. ಟಿ. ಡಿ. ಪಿ. ಯೋಜನಾಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.