ಉಡುಪಿ: ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ನಗರಸಭಾ ವ್ಯಾಪ್ತಿಯ ಹಲವೆಡೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ರಸ್ತೆಗಳಲ್ಲಿ ಗುಂಡಿ, ಅಸಮರ್ಪಕ ಚರಂಡಿ ವ್ಯವಸ್ಥೆ ಸಹಿತ ವಿವಿಧ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿಗಳನ್ನು ನಡೆಸುವಂತೆ ನಗರಸಭೆ ಅಧಿಕಾರಿಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿ ನಗರ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು ನಗರದ ಪ್ರಮುಖ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಕ್ರಮ ವಹಿಸಿ,ಮುಂಬರುವ ಹಬ್ಬಗಳ ಮೆರವಣಿಗೆ ಸಾಗುವ ರಸ್ತೆ ಬದಿಯ ಕಳೆ ತೆರವು, ಇತ್ತೀಚೆಗೆ ಕೃತಕ ನೆರೆ ಉಂಟಾದ ಪ್ರದೇಶಗಳಲ್ಲಿ ಕಾಲುವೆ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಲು ಕ್ರಮ ಹಾಗೂ ಬಾಕಿ ಉಳಿದಿರುವ ಅಪಾಯಕಾರಿ ಮರಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿ ಬುಧವಾರ ನಗರಸಭೆಯಲ್ಲಿ ಹಿರಿಯ ನಾಗರಿಕರ ಭೇಟಿ ಸಮಯ ಮೀಸಲು, ಹಳೆಯ ವಿಶ್ವೇಶ್ವರ ಮಾರುಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ, ಪಾರ್ಕಿಂಗ್ ಸೌಲಭ್ಯದೊಂದಿಗೆ ವ್ಯವಸ್ಥಿತ ನೂತನ ಬಸ್ ನಿಲ್ದಾಣದ ನೀಲ ನಕಾಶೆ ತಯಾರಿಸಲು ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕಾಮಗಾರಿಗಳ ತಕ್ಷಣ ಆರಂಭ, ಸಮರ್ಪಕ ದಾರಿ ದೀಪ ನಿರ್ವಹಣೆಯ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಸಾರ್ವಜನಿಕ ಆಸ್ತಿ ಪಾಸ್ತಿಯ ಸುಮಾರು 25 ಕೋಟಿ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಿ, ಉಡುಪಿ ವಿಧಾನ ಸಭಾ ಕ್ಷೇತ್ರದ ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 55 ಮನೆಗಳು ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿದ್ದು, ಕಂದಾಯ ಇಲಾಖೆಯಿಂದ ಪರಿಹಾರ ಧನವಾಗಿ ಕೇವಲ ರೂ. 10,03,500 ಮಾತ್ರ ಮಂಜೂರು ಗೊಂಡಿದ್ದು, ಸರ್ಕಾರ ಕೂಡಲೇ ಪೂರ್ಣ ಹಾನಿಗೀಡಾದ ಮನೆಗಳಿಗೆ 5 ಲಕ್ಷ, ಭಾಗಶಃ ಹಾನಿಯಾದ ಮನೆಗಳಿಗೆ 3 ಲಕ್ಷವನ್ನು ಈ ಹಿಂದಿನಂತೆ ಮಂಜೂರು ಮಾಡುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸುವುದಾಗಿ ಹೇಳಿದರು.ಸಭೆಯಲ್ಲಿ ನಗರಸಭೆ ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.