ಉಡುಪಿ: ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರಕಾರದ ಅವಗಣನೆ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೈಯಲ್ಲಿ ಚೊಂಬು ಹಿಡಿದುಕೊಂಡು ಉಡುಪಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಪಾಲ್ಗೊಂಡಿದ್ದ ನೂರಾರು ಕೈ ಕಾರ್ಯಕರ್ತರು ಚೊಂಬು ಪ್ರದರ್ಶಿಸಿ ಕೇಂದ್ರ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಅವರು, ಭಾರತ ಇಂದು ಬಡತನದಲ್ಲಿ ಜಗತ್ತಿನಲ್ಲಿಯೇ 111ಸ್ಥಾನದಲ್ಲಿದೆ. ಶೇ.35ರಷ್ಟು ಇದ್ದ ನಿರುದ್ಯೋಗ ಶೇ. 85ಕ್ಕೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ತನ್ನ ಬಜೆಟ್ ನಲ್ಲಿ ಪ್ರತಿ ರಾಜ್ಯಗಳಿಗೆ ಶೇ.41ರಷ್ಟು ಅನುದಾನ ನೀಡಬೇಕು. ಆದರೆ ಈ ಬಾರಿ ಶೇ.35ರಷ್ಟು ಮಾತ್ರ ಅನುದಾನ ನೀಡಿ ಅನ್ಯಾಯ ಮಾಡಿದೆ. ತನ್ನ ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಬಿಹಾರ, ಆಂಧ್ರ ರಾಜ್ಯಗಳಿಗೆ ಆದ್ಯತೆ ನೀಡಿ, ಕರ್ನಾಟಕದಂತಹ ರಾಜ್ಯಗಳಿಗೆ ಅನುದಾನ ನೀಡದೆ ತಾರತ್ಯಮ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಉಪಾಧ್ಯಕ್ಷ ಎಮ್. ಎ ಗಪೂರ್, ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಅಮೃತ್ ಶೆಣೈ, ಹರೀಶ್ ಕಿಣಿ ಅಲೆವೂರು, ವೆರೋನಿಕಾ ಕರ್ನೇಲಿಯೊ ಮೊದಲಾದವರು ಪಾಲ್ಗೊಂಡಿದ್ದರು.