ಹೆಬ್ರಿ ಅಮೃತ ಭಾರತಿಯಲ್ಲಿ ಕನ್ನಡ ಗೀತಾ ಗಾನಯಾನ

ಹೆಬ್ರಿ: ಕನ್ನಡದ ಅಭಿಮಾನ ಕೇವಲ ದಿನಕ್ಕೆ ಸೀಮಿತವಾಗಬಾರದು ಎಂಬ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ವಷ೯ವಿಡಿ ಕನ್ನಡ ಗೀತೆಗಳನ್ನು ಸ್ಥಳೀಯ ಗ್ರಾಮೀಣ ಪ್ರತಿಭೆಗಳಿಂದ ಹಾಡಿಸಿ ಕನ್ನಡದ ಜಾಗೃತಿ ಮೂಡಿಸುತ್ತಿರುವುದರ ಜತೆಗೆ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಪಿ ಆರ್ ಎನ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರಾಜೇಶ್ ನಾಯಕ್ ಹೇಳಿದರು.

ಅವರು ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರದ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಸುವರ್ಣ ಕನಾ೯ಟಕದ ಅಂಗವಾಗಿ ಪಿ ಆರ್ ಎನ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಕನ್ನಡ ಗೀತೆಗಳ ಗಾಯನ ಗಾನಯಾನ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪಿ ಆರ್ ಎನ್ ಅಮೃತ ಭಾರತಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ವಹಿಸಿ ಪ್ರತಿಯೊಬ್ಬರನ್ನು ಕೂಡ ಒಂದೊಂದು ಪ್ರತಿಭೆ ಇರುತ್ತದೆ ಅದನ್ನು ಪೋಷಕರು ಗುರುತಿಸಿ ಅವಕಾಶ ಕಲ್ಪಿಸಿದಾಗ ಮಾತ್ರ ಅದು ಅನಾವರಣಗೊಳ್ಳಲು ಸಾಧ್ಯ. ಚಾಣಕ್ಯ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ತೆರೆಮರೆಯಲ್ಲಿದ್ದ ಗ್ರಾಮೀಣ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಉಪನ್ಯಾಸಕ ಸುಹಾಸ್ ಶೆಟ್ಟಿ ಮುಟ್ಲುಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಚಾಣಕ್ಯ ಮೆಲೋಡಿಸ್ ನ ನಿರೂಪಕಿ ದೀಪಿಕಾ ಶೆಟ್ಟಿ, ಗಾಯಕರಾದ ನಿತ್ಯಾನಂದ ಭಟ್, ಸುಬ್ರಹ್ಮಣ್ಯ ಕಂಗಿನಾಯ,ಪ್ರಸನ್ನ ಮುನಿಯಾಲ್, ವೇದಾ ಶಿವಪುರ ಹಾಗೂ ಅಮೃತ ಭಾರತೀಯ ವಿದ್ಯಾರ್ಥಿಗಳು ಕನ್ನಡ ಗೀತ ಗಾಯನ ನಡೆಸಿಕೊಟ್ಟರು. ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಅಮೃತ ಭಾರತಿ ಶಿಕ್ಷಣ ಸಂಸ್ಥೆಯ ಪಿ ಆರ್ ಓ ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.