ಅಂಗನವಾಡಿ ಕೇಂದ್ರಗಳ ಬಾಡಿಗೆ ಹೆಚ್ಚಳಕ್ಕೆ ಕ್ರಮ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ವಿಧಾನಸಭೆ: ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಬಾಡಿಗೆ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಸಾಲಿನ ಬಾಡಿಗೆ ಪಾವತಿಗೆ ಅನುದಾನದ ಕೊರತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬುಧವಾರ ಪ್ರಶ್ನೋತ್ತರ ಕಲಾಪದಲ್ಲಿ ಬಸವನಗುಡಿಯ ಬಿಜೆಪಿ ಸದಸ್ಯ ಎಲ್. ಎ. ರವಿ ಸುಬ್ರಹ್ಮಣ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ 2024-25ನೇ ಸಾಲಿನ ಡಿಸೆಂಬರ್ ತಿಂಗಳವರೆಗೆ ಅಂಗನವಾಡಿ ಕೇಂದ್ರಗಳ ಬಾಡಿಗೆ ಮೊತ್ತವನ್ನು ಪಾವತಿಸಲಾಗಿದೆ ಎಂದರು.

ಅಂಗನವಾಡಿ ಕೇಂದ್ರಗಳ ಮಕ್ಕಳು, ಇತರೆ ಫಲಾನುಭವಿಗಳು ಇಲಾಖೆಯ ಯಾವುದೇ ಸೇವೆಗಳಿಂದ ವಂಚಿತರಾಗದಂತೆ ಕ್ರಮ ವಹಿಸಲಾಗಿದೆ. ಸ್ವಂತ ಕಟ್ಟಡಗಳಿಲ್ಲದ ಪ್ರದೇಶದಲ್ಲಿ ಅಂಗನವಾಡಿಗಳನ್ನು ಬಿಬಿಎಂಪಿ, ಇನ್ನಿತರ ಸರ್ಕಾರಿ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ; ಕೆಲವೆಡೆ ಉತ್ತಮ ಮೂಲ ಸೌಕರ್ಯವುಳ್ಳ ಬಾಡಿಗೆ ಕಟ್ಟಡಗಳಲ್ಲೂ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ರಾಜ್ಯದಲ್ಲಿ 20,266 ಲಿಂಗತ್ವ ಅಲ್ಪಸಂಖ್ಯಾತರು:
ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣದ ಬಗ್ಗೆ ಮೂಡಿಗೆರೆಯ ಆಡಳಿತ ಪಕ್ಷದ ಸದಸ್ಯೆ ನಯನಾ ಮೋಟಮ್ಮ ಅವರು ಕೇಳಿದ ಉಪ ಪ್ರಶ್ನೆಗೆ ಉತ್ತರಿಸಿದ ಸಚಿವರು, 2011ರ ಜನಗಣತಿಯ ಪ್ರಕಾರ, ರಾಜ್ಯದಲ್ಲಿ 20,266 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಇನ್ನು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳಿಂದ ಪಡೆದ ಅಂಕಿ ಅಂಶಗಳ ಪ್ರಕಾರ 43,752 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.