ಮಣಿಪಾಲ: (MSDC) ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಹಾಗೂ ಕ್ಯಾಡ್ ಸೆಂಟರ್, ಇವಿ ಲ್ಯಾಬ್ ನ ಉದ್ಘಾಟನಾ ಸಮಾರಂಭವು ಜು.22 ರಂದು ನಡೆಯಿತು.

ಎಂಎಸ್ ಡಿಸಿ ಉದ್ಘಾಟಿಸಿ ಕೇಂದ್ರ ಸರ್ಕಾರದ ಎಂಎಸ್ ಡಿಸಿ, ಎನ್ ಸಿವಿಇಟಿ ಮಾಜಿ ಅಧ್ಯಕ್ಷ ಡಾ.ನಿರ್ಮಲ್ ಜೀತ್ ಸಿಂಗ್ ಕಲ್ಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಶೈಕ್ಷಣಿಕ ಅರ್ಹತೆಯೊಂದಿಗೆ ಕೌಶಲ್ಯವು ಅತಿ ಅವಶ್ಯವಾಗಿದೆ. ವಿದ್ಯಾರ್ಥಿಗಳ ಅಭ್ಯುದಯಕ್ಕೆ ಎಂಎಸ್ ಡಿಸಿ ಸೆಂಟರ್ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕೌಶಲ್ಯ ತರಬೇತಿಯಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶೈಕ್ಷಣಿಕ ಕ್ರೆಡಿಟ್ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಕೌಶಲ್ಯ ಕಲಿಸುವ ಕಾರ್ಯವಾಗುತ್ತಿದೆ. ಮಣಿಪಾಲ ಎಂಎಸ್ ಡಿಸಿ’ಯು ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಡಾ. ಟಿಎಂಎ ಪೈ ಫೌಂಡೇಶನ್ ಖಜಾಂಚಿ ಟಿ. ಸಚಿನ್ ಪೈ ಅವರು ಮಾತನಾಡಿ, ಕೋವಿಡ್ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗೆ ಸಾಕಷ್ಟು ಹೊಡೆತ ಬಿದ್ದಿವೆ. ಆ ನಂತರದಲ್ಲಿ ಕೌಶಲ್ಯಾಧಾರಿತ ಕೋರ್ಸುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 400ಕ್ಕೆ 400 ಸೀಟು ಭರ್ತಿಯಾಗಿದೆ ಎಂದರು. ಇಂದು ಭಾರತದಲ್ಲಿ ಅರ್ಧದಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ, ನಾವು ವಿಶ್ವದಲ್ಲೇ ಅತಿದೊಡ್ಡ ಗ್ರಾಹಕ ಆಧಾರವನ್ನು ಹೊಂದಿದ್ದೇವೆ. ಹಾಗಾಗಿ ಉದ್ಯಮದಲ್ಲಿ ನಾವು ಶಕ್ತಿಯುತ ಮತ್ತು ಪರಿಣಾಮಕಾರಿಯಾಗಿ ಕೆಲಸದ ಮೂಲವನ್ನು ಹೊಂದಲು ಕೌಶಲ್ಯ ಅಭಿವೃದ್ಧಿ ಕೇಂದ್ರವು ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಮಾಹೆ ಕುಲಪತಿ ಡಾ. ಎಂ.ಡಿ. ವೆಂಕಟೇಶ್ ಮಾತನಾಡಿ ಶೈಕ್ಷಣಿಕ ಅರ್ಹತೆ ಜೊತೆಗೆ ಕೈಗಾರಿಕೆಗಳ ಅವಶ್ಯವಿರುವ ಕೌಶಲಪೂರ್ಣ ಪದವೀಧರರನ್ನು ರೂಪಿಸುವ ಕಾರ್ಯ ಆಗಬೇಕಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ಕೌಶಲಾಧಾರಿತ ಶಿಕ್ಷಣ ನೀಡಬಲ್ಲ ಪಠ್ಯಕ್ರಮ ರಚಿಸುವ ಅಗತ್ಯತೆ ಹೆಚ್ಚಿದೆ ಎಂದು ತಿಳಿಸಿದರು.

ಕ್ಯಾಡ್ ಸೆಂಟರ್ ಗ್ರೂಪ್ ಎಂಡಿ ಎಸ್ ಕೆ. ಸೆಲ್ವನ್ ಮಾತನಾಡಿ, ಇಂದು ಎಂಎಸ್ ಡಿಸಿ ಯ ಉಪಕ್ರಮವು ವಿಶ್ವದರ್ಜೆಯ ಇಂಜಿನಿಯರ್‌ಗಳನ್ನು, ವಿಶ್ವ ದರ್ಜೆಯ ನುರಿತ ವೃತ್ತಿಪರರನ್ನು ಸೃಷ್ಟಿಸಲಿದೆ. ಎಂಎಸ್ ಡಿಸಿ ಯೊಂದಿಗೆ ಸಂಯೋಜಿಸಲು ನಮಗೆ ತುಂಬಾ ಸಂತೋಷವಾಗಿದೆ. ಈ ಕೌಶಲ್ಯ ಉಪಕ್ರಮದ ಭಾಗವಾಗಲು ಉತ್ತಮ ಅವಕಾಶವನ್ನು ನೀಡಿದ ಪಾಲಿಟೆಕ್ನಿಕ್ ಸಚಿನ್ ಪೈ ಮತ್ತು ಡಾ.ಪಬ್ಲಾ ಅವರ ಸಂಪೂರ್ಣ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದರು. ಎಂಐಟಿ ನಿರ್ದೇಶಕ ಅನಿಲ್ ರಾಣಾ ಹಾಗೂ ಸದಸ್ಯ ಕಾರ್ಯದರ್ಶಿ ಸಂತೋಷ್ ಕುಮಾರ್ ಮಾತನಾಡಿದರು.
ಮಣಿಪಾಲ ಎಂ ಎಸ್ ಡಿ ಸಿ ಮುಖ್ಯಸ್ಥ ಬ್ರಿ.ಡಾ.ಸುಜಿರ್ತ್ ಸಿಂಗ್ ಪಬ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂಎಸ್ ಡಿಸಿ ರಿಜಿಸ್ಟ್ರಾರ್ ಡಾ. ನಾರಾಯಣ ಶೆಣೈ, ಬಿಬಿನ ಅತಿಥಿಗಳ ಪರಿಚಯ ಮಾಡಿದರು. ಡಾ. ಸುಗಂಧಿನಿ ಎಚ್.ಕೆ. ಕಾರ್ಯಕ್ರಮ ನಿರೂಪಿಸಿದರು. ಕೌಶಲ್ಯ ವಿಭಾಗ ಮುಖ್ಯಸ್ಥ ಡಾ. ಅಂಜಯ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.






















