ಮೈಕ್ರೋಸಾಫ್ಟ್ ನ ಸೇವೆಗಳಲ್ಲಿ ಉಂಟಾದ, ‘ಬ್ಲೂಸ್ಕ್ರೀನ್ ಸಡನ್ ಡೆತ್’ ಎಂಬ ತಾಂತ್ರಿಕ ದೋಷದಿಂದಾಗಿ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ವಿಮಾನ ನಿಲ್ದಾಣಗಳು, ವಿಮಾನ ಸೇವೆಗಳು, ಷೇರು ಮಾರುಕಟ್ಟೆಗಳು, ಬ್ಯಾಂಕಿಂಗ್ ಸೇವೆಗಳು, ಹೋಟೆಲ್ ಸೇವೆಗಳು ಸೇರಿದಂತೆ ಎಲ್ಲಾ ರೀತಿಯ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿವೆ. ಸರ್ಕಾರಿ ಕಚೇರಿಗಳಲ್ಲಿನ ಸೇವಾ ಕೇಂದ್ರಗಳೂ ಸ್ವಯಂಚಾಲಿತವಾಗಿ ಸ್ತಬ್ಧವಾಗಿವೆ.
ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅದರಿಂದಾಗಿ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೊರಡಬೇಕಿದ್ದ ಹಲವಾರು ವಿಮಾನಗಳನ್ನು ಗಗನಕ್ಕೆ ಹಾರಿಲ್ಲ. ವಾಯು ಸೇವೆಗಳು, ಬ್ಯಾಂಕಿಂಗ್ , ಷೇರು ಮಾರುಕಟ್ಟೆಯ ಮೇಲೆ ಅತಿ ಹೆಚ್ಚು ದುಷ್ಪರಿಣಾಮ ಬೀರಿದೆ.
ಅಂತಾರಾಷ್ಟ್ರೀಯ ಸೇವೆಗಳಿಗೆ ಬೇಕಾಗುವ ಸಾಫ್ಟ್ ವೇರ್ ಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷವಾಗಿದೆ. ಈ ಸಾಫ್ಟ್ ವೇರ್ ಗಳಡಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಗಳ ಪರದೆಗಳು ಬ್ಲೂ ಸ್ಕ್ರೀನ್ ಗಳಾಗಿ ಪರಿವರ್ತನೆಗೊಂಡು, ಆನಂತರ ಇದ್ದಕ್ಕಿದ್ದಂತೆ ಕಂಪ್ಯೂಟರ್ ಗಳು ಶಟ್ ಡೌನ್ ಆಗುತ್ತಿವೆ. ಇದನ್ನು ತಾಂತ್ರಿಕ ಭಾಷೆಯಲ್ಲಿ ಬ್ಲೂ ಸ್ಕ್ರೀನ್ ಡೆತ್ ಎಂದು ಕರೆಯಲಾಗುತ್ತದೆ. ಕೇವಲ ಕಂಪ್ಯೂಟರ್ ಗಳು ಮಾತ್ರವಲ್ಲ, ಈ ಸಾಫ್ಟ್ ವೇರ್ ನೊಂದಿಗೆ ಜೋಡಿಸಲ್ಪಟ್ಟಿರುವ ವಿಮಾನ ನಿಲ್ದಾಣಗಳು, ಬ್ಯಾಂಕುಗಳು, ಷೇರು ಮಾರುಕಟ್ಟೆಗಳ ಮುಂತಾದ ಕಡೆಯಿರುವ ಟಿವಿ ಪರದೆಗಳು, ಡಿಸ್ ಪ್ಲೇ ಬೋರ್ಡ್ ಗಳು ಎಲ್ಲವೂ ಬ್ಲೂ ಸ್ಕ್ರೀನ್ ಗೆ ತಿರುಗಿವೆ.
ಪವರ್ ಬಿಐ, ಮೈಕ್ರೋಸಾಫ್ಟ್ ಫ್ಯಾಬ್ರಿಕ್, ಮೈಕ್ರೋಸಾಫ್ಟ್ ಟೀಮ್ಸ್, ಮೈಕ್ರೋಸಾಫ್ಟ್ 365 ಅಡ್ಮಿನ್ ಸೆಂಟರ್, ಮೈಕ್ರೋಸಾಫ್ಟ್ ಪರ್ವ್ಯೂ, ವಿವಾ ಎಂಗೇಜ್ ಎಂಬ ಸಾಫ್ಟ್ ವೇರ್ ಗಳಲ್ಲಿ ಈ ರೀತಿಯ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದಲ್ಲದೆ, ಮೈಕ್ರೋಸಾಫ್ಟ್ ಡಿಫೆಂಡರ್, ಮೈಕ್ರೋಸಾಫ್ಟ್ ಡಿಫೆಂಡರ್ ಫಾರ್ ಎಂಡ್ ಪಾಯಿಂಟ್, ಮೈಕ್ರೋಸಾಫ್ಟ್ ಇನ್ ಟ್ಯೂನ್, ಮೈಕ್ರೋಸಾಫ್ಟ್ ಒನ್ ನೋಟ್, ಒನ್ ಡ್ರೈವ್ ಫಾರ್ ಬ್ಯುಸಿನೆಸ್, ಶೇರ್ ಪಾಯಿಂಟ್ ಆನ್ ಲೈನ್, ವಿಂಡೋಸ್ 365 ಅಡಿಯಲ್ಲಿನ ಕ್ಲೌಡ್ ಪಿಸಿಗಳಲ್ಲೂ ಈ ರೀತಿಯ ತೊಂದರೆಗಳು ಕಾಣಿಸಿಕೊಂಡಿವೆ.
ಕರ್ನಾಟಕದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದಲೂ ಹಲವಾರು ವಿಮಾನಗಳ ಹಾರಾಟವನ್ನು ಮುಂದೂಡಲಾಗಿದೆ. ಅಮೆರಿಕದ ಪ್ರಮುಖ ವಿಮಾನ ಸೇವೆಗಳಾದ, ಡೆಲ್ಟಾ ಏರ್ ಲೈನ್ಸ್, ಯುಎಸ್ ಏರ್ ಲೈನ್ಸ್ ವಿಮಾನಗಳ ಸೇವೆಯನ್ನು ತಡೆಹಿಡಿಯಲಾಗಿದೆ. ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ಹಿಂದಿರುಗಿಸಲಾಗಿದೆ. ವಿಮಾನ ಸೇವೆಗಳಿಗಾಗಿ ಕಾಯುತ್ತೇವೆ ಎನ್ನುವವರಿಗೆ ವಿಮಾನ ನಿಲ್ದಾಣಗಳ ಬೋರ್ಡಿಂಗ್ ಪಾಸ್ ಗಳನ್ನು ಕೈಯ್ಯಲ್ಲೇ ಬರೆದುಕೊಡಲಾಗುತ್ತಿದೆ.
ಭಾರತದಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಭಾರತದ ಪ್ರಮುಖ ವಿಮಾನ ಸೇವಾ ಸಂಸ್ಥೆಗಳಾದ ಸ್ಪೈಸ್ ಜೆಟ್, ಆಕಾಶ ಏರ್ ಲೈನ್ಸ್ ಸಂಸ್ಥೆಗಳು ಮೈಕ್ರೋಸಾಫ್ಟ್ ಸಾಫ್ಟ್ ವೇರ್ ನಲ್ಲಿ ಕಾಣಿಸಿಕೊಂಡಿರುವ ದೋಷದಿಂದಾಗಿ ತಮ್ಮ ಸಂಸ್ಥೆಯ ಅನೇಕ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ ಎಂದು ಹೇಳಿವೆ.