ಕುಂದಾಪುರ:ಇನ್ನೂ ನಿಂತಿಲ್ಲ ಮಳೆಯ ರೌದ್ರ ಆರ್ಭಟ !

ಕುಂದಾಪುರ: ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿದ ಭಾರೀ ಮಳೆ ಬುಧವಾರವೂ ಮುಂದುವರಿದಿದೆ. ಸೋಮವಾರ ರಾತ್ರಿಯಿಂದ ಎಡೆಬಡದೆ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಸೌಪರ್ಣಿಕಾ, ಚಕ್ರಾ ಹಾಗೂ ವಾರಾಹಿ ನದಿಗಳು ತುಂಬಿ ಹರಿದ ಪರಿಣಾಮ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದ್ದು, ಸ್ಥಳೀಯ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಹಡವು, ಪಡುಕೋಣೆ ಮುಂತಾದ ಊರುಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿವೆ. ಮನೆಗಳು, ಕೃಷಿ ಗದ್ದೆ, ತೆಂಗಿನ ತೋಟಗಳಲ್ಲಿ ಆಳೆತ್ತರದ ನೀರು ನಿಂತಿದ್ದು, ದೋಣಿಗಳ ಮೂಲಕ ನಿವಾಸಿಗಳನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆತರಲಾಗಿದೆ. ನಾವುಂದ ಬಡಾಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಜಲಾವೃತಗೊಂಡಿದ್ದು, ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದೆ.

ಎಮ್ಮೆಗಳ ಪಾಡು:
ಚಿಕ್ಕಳ್ಳಿಯಲ್ಲಿ ೧೫ಕ್ಕೂ ಅಧಿಕ ಮನೆಗಳಿಗೆ ನೆರೆ ನೀರು ನುಗ್ಗಿದೆ. ದೋಣಿಗಳ ಮೂಲಕ ದನ ಕರುಗಳನ್ನು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಚಿಕ್ಕಳ್ಳಿ ರಾಘವೇಂದ್ರ ಹೆಬ್ಬಾರ್ ಅವರ ಮನೆ ಹಾಗೂ ಕೊಟ್ಟಿಗೆಗೆ ನೀರು ನುಗ್ಗಿದ್ದು, ಕೊಟ್ಟಿಗೆಯಲ್ಲಿರುವ ಎಮ್ಮೆಗಳನ್ನು ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಎಮ್ಮೆಗಳು ಕೊಟ್ಟಿಗೆಯೊಳಗೆ ನೀರಿನಲ್ಲೇ ನಿಂತುಕೊಂಡಿವೆ.

 ಮನೆ ಮನೆಗೂ ದೋಣಿ:
ಬಡಾಕೆರೆಯಲ್ಲಿ ಮನೆ ಅಂಗಳ ಮುಚ್ಚಿ ನೀರು ಮನೆಯೊಳಗೆ ನುಗ್ಗಿದರೆ, ಚಿಕ್ಕಳ್ಳಿಯ ನಿವಾಸಿಗಳು ಸಂಚಾರಕ್ಕಾಗಿ ದೋಣಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ತೀರಾ ತಗ್ಗು ಪ್ರದೇಶವಾದ ಚಿಕ್ಕಳ್ಳಿಯಲ್ಲಿ ಯಾವುದೇ ಕ್ಷಣದಲ್ಲಾದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಬಹುದೆಂಬ ಕಾರಣಕ್ಕೆ ಮನೆಯವರೇ ಮುಂಜಾಗ್ರತ ಕ್ರಮವಾಗಿ ಪ್ರತೀ ಮನೆಯಲ್ಲೂ ದೋಣಿಗಳನ್ನು ಕಟ್ಟಿಹಾಕಿದ್ದಾರೆ.