ಆಗಸ್ಟ್ 9ರಂದು ಬಹರೈನ್ ನಲ್ಲಿ ‘ಆಟಿದ ಒಂಜಿ ದಿನ’ ಕಾರ್ಯಕ್ರಮ

ಉಡುಪಿ: ತುಳುಕೂಟ ಬಹರೈನ್ ಸಂಸ್ಥೆಯ ಆಶ್ರಯದಲ್ಲಿ ‘ಆಟಿದ ಒಂಜಿ ದಿನ’ ಕಾರ್ಯಕ್ರಮವನ್ನು ಆಗಸ್ಟ್ 9ರಂದು ಬಹರೈನ್ ನ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕ ರಾಜ್ ಕುಮಾರ್ ತಿಳಿಸಿದರು.ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟಿ ತಿಂಗಳಿನ ವಿಶೇಷತೆಗಳನ್ನು ಬಹರೈನ್ ನಲ್ಲಿ ನೆಲೆಸಿರುವ ತುಳುವರಿಗೆ, ವಿಶೇಷವಾಗಿ ಅಲ್ಲಿ ಬೆಳೆಯುತ್ತಿರುವ ತುಳುನಾಡಿನ ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಹಾಗೂ ತುಳುವರೆಲ್ಲಾ ಬೆರೆತು ಖುಷಿ ಪಡುವ ಒಂದು ಕಾರ್ಯಕ್ರಮ ಇದಾಗಿದೆ. ಸುಮಾರು ಒಂದೂವರೆ ಸಾವಿರ ತುಳುವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಆಟಗಳು ಅಂದಿನ ಕಾರ್ಯಮದಲ್ಲಿ ಮೇಳೈಸಲಿವೆ. ತುಳುನಾಡಿನ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತುಳುಕೂಟದ ಸದಸ್ಯರು ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತುಳುನಾಡಿನ ಕೊಂಕಣಿ, ಕ್ರೈಸ್ತ ಹಾಗೂ ಬ್ಯಾರಿ ಸಮುದಾಯದವರೂ ಕೈಜೋಡಿಸಲಿದ್ದಾರೆ ಎಂದು ಅವರು ತಿಳಿಸಿದರು.
ತುಳುನಾಡಿನಿಂದ ಆಟಿಯ ಖಾದ್ಯಗಳನ್ನು ತಯಾರಿಸುವ ನಿಟ್ಟಿನಲ್ಲಿ ಬೇಕಾಗುವ ತರಕಾರಿಗಳು ಹಾಗೂ ವಿವಿಧ ಎಲೆಗಳನ್ನು ವಿಶೇಷವಾಗಿ ಉಡುಪಿ, ಮಂಗಳೂರಿನಿಂದ ನಮ್ಮ ಸದಸ್ಯರು ಕೊಂಡೊಯ್ಯಲಿದ್ದಾರೆ. ಹಾಗೆಯೇ, ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುವ ಖಾದ್ಯಗಳ ರುಚಿಯನ್ನು ಅಲ್ಲಿನ ತುಳುವರಿಗೆ ಪರಿಚಯಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ ಸುವರ್ಣ ಮುಲ್ಕಿ, ನಿರೂಪಕ ನವೀನ ಶೆಟ್ಟಿ ಎಡೈಮಾರ್, ವಿಜಯಕುಮಾರ್ ನಾಯ್ಕ್, ಜಯಕುಮಾರ್, ಗಗನ್ ಸುವರ್ಣ ಇದ್ದರು.