ಪಡುಬಿದ್ರಿ: ಮಗಳ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ತಂದೆ.

ಪಡುಬಿದ್ರಿ: ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣ, ವಿವಿಧ ವಾಟ್ಸಪ್ ಗ್ರೂಪ್ ಗಳಲ್ಲಿ ತನ್ನ ಮಗಳ ಖಾಸಗಿ ವಿಡಿಯೋಗಳನ್ನು ಹರಿಬಿಟ್ಟಿದ್ದು, ಇದೀಗ ಆತನ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ನಡುವೆ ಆರೋಪಿಯ ಪುತ್ರಿಯ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ವಿವರ:
ಕಂಚಿನಡ್ಕದ ನಿವಾಸಿ ಆರೋಪಿ ಮಗಳು ಹಾಗೂ ತೀರ್ಥ ಹಳ್ಳಿಯ ಅವರ ಸಂಬಂಧಿ ತೌಸೀಫ್‌ ಪ್ರೀತಿಸುತ್ತಿದ್ದು, ಇದು ತಂದೆಗೆ ಇಷ್ಟವಿರಲಿಲ್ಲ. ಆರೋಪಿಯು ತೌಸೀಫ್‌ನನ್ನು ಮನೆಗೆ ಕರೆಸಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಆತ ಹಾಗೂ ತನ್ನ ಮಗಳ ಫೋನ್‌ಗಳನ್ನು ಕಸಿದುಕೊಂಡು ಅದರಲ್ಲಿದ್ದ ವೀಡಿಯೋಗಳನ್ನು ತನ್ನ ಫೋನ್‌ಗೆ ವರ್ಗಾಯಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ವಾಟ್ಸಾಪ್‌ ಗುಂಪುಗಳಿಗೆ ಆರೋಪಿಯು ರವಾನಿಸಿದ್ದಾನೆ.
ಇದಕ್ಕೆ ಪತ್ನಿ ಆಕ್ಷೇಪಿಸಿದ್ದು, ಆಕೆಗೆ ಮತ್ತು ಪುತ್ರಿಗೆ ಹಲ್ಲೆಯನ್ನೂ ಮಾಡಿದ್ದಾನೆ. ಈ ಕುರಿತಾಗಿ ಪತ್ನಿಯು ಉಡುಪಿ ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪತ್ನಿಯು ಉಚ್ಚಿಲದ ತನ್ನ ತಾಯಿ ಮನೆಯಲ್ಲಿದ್ದಾಗ ಅಲ್ಲಿಗೂ ಹೋಗಿ ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.