ದಕ್ಷಿಣ ಕನ್ನಡ, ಉಡುಪಿಗೆ ಚಡ್ಡಿ ಗ್ಯಾಂಗ್‌ ಎಂಟ್ರಿ: ಕಳ್ಳರ ಕೃತ್ಯ ಸಿಸಿ ಕೆಮರಾದಲ್ಲಿ ಸೆರೆ.

ಮಂಗಳೂರು: ಮಂಗಳೂರು ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ‘ಚಡ್ಡಿ ಗ್ಯಾಂಗ್‌’ ಎಂಬ ಕಳ್ಳರ ತಂಡ ಶನಿವಾರ ರಾತ್ರಿ ಕೋಡಿಕಲ್‌ನ ಮನೆಯೊಂದರಲ್ಲಿ ಕಳ್ಳತನ ಘಟನೆ ನಡೆದಿದ್ದು, ಇದೇ ತಂಡ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌, ಮಧ್ಯಪ್ರದೇಶ, ರಾಜಸ್ಥಾನ ಮೊದಲಾದೆಡೆಗಳ ಕಳ್ಳರನ್ನು ಹೊಂದಿರುವ ಚಡ್ಡಿ ಗ್ಯಾಂಗ್‌, ಈ ಹಿಂದೆಯೂ ದ.ಕ., ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮನೆ ಕಳ್ಳತನ ಕೃತ್ಯ ನಡೆಸಿದೆ.

ಕಳ್ಳರು ಮೈಮೇಲೆ ಚಡ್ಡಿ, ಬನಿಯಾನ್‌, ತಲೆ ಮೇಲೊಂದು ಬಟ್ಟೆ ಸುತ್ತಿಕೊಂಡಿದ್ದು, ಗ್ಯಾಂಗ್‌ನ ಸದಸ್ಯರು ಸೊಂಟದಲ್ಲಿ ಆಯುಧಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ನಿರಂತರ ಮಳೆಯಾಗುವ ದಿನಗಳಲ್ಲಿ ರಾತ್ರಿ ವೇಳೆ ಮನೆಮಂದಿ ಗಾಢ ನಿದ್ದೆಯಲ್ಲಿರುವಾಗ ಇಂತಹ ತಂಡ ಕಾರ್ಯಾಚರಣೆಗೆ ಇಳಿಯುತ್ತಿದೆ.

ಸಿಸಿ ಕೆಮರಾದಲ್ಲಿ ಸೆರೆ:
ಕೋಡಿಕಲ್‌ನ ವಿವೇಕಾನಂದ ನಗರದಲ್ಲಿ ರವಿವಾರ ನಸುಕಿನ ವೇಳೆ ಮನೆಯವರು ಮಲಗಿದ್ದಾಗ ಕಳ್ಳರು ನುಗ್ಗಿದ್ದಾರೆ. 2 ಗಂಟೆಯ ಸುಮಾರಿಗೆ ಮನೆಯ ಕಿಟಕಿಯ ಸರಳುಗಳನ್ನು ಕಿತ್ತು ಒಳನುಗ್ಗಿರುವ ಸುಮಾರು 5 ಮಂದಿ ಕಳ್ಳರ ತಂಡ ಮನೆಯ ಕೋಣೆಯೊಂದರಲ್ಲಿ ಜಾಲಾಡಿ ಬಳಿಕ ಮನೆಯವರು ಮಲಗಿದ್ದ ಬೆಡ್‌ರೂಮ್‌ಗೂ ಪ್ರವೇಶಿಸಿದೆ. ಕಪಾಟಿನಲ್ಲಿ ಇಟ್ಟಿದ್ದ 10,000 ರೂ. ನಗದು ಕಳವು ಮಾಡಿದೆ. ಘಟನೆ ಮರುದಿನ ಎದ್ದಾಗಲೇ ಮನೆ ಮಂದಿಯ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಕಳ್ಳರು
ಕೃತ್ಯ ನಡೆದಿರುವ ಘಟನೆ ಪಕ್ಕದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಕೆಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ. ಕಳ್ಳರು ಸರಿಸುಮಾರು 1.40 ಗಂಟೆ ಆ ಮನೆಯಲ್ಲಿ ಉಳಿದುಕೊಂಡಿದ್ದರು. ಮನೆಯಿಂದ ಹೊರಬಂದವರು ರಸ್ತೆಪಕ್ಕದ ಮೆಟ್ಟಿಲುಗಳಲ್ಲಿ ಇಳಿದುಕೊಂಡು ಹೋಗಿದ್ದರು. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.