ಕುಂದಾಪುರ: ಕರಾವಳಿಯಲ್ಲಿ ನಾಗನಿಗೆ ಹರಕೆ ಸೇವೆಗಳು ಸಲ್ಲಿಸುವ ಸಂಪ್ರದಾಯ ಹೆಚ್ಚು. ಷಷ್ಠಿ ಮಹೋತ್ಸವ, ಕಿರುಷಷ್ಠಿ ನಾಗನ ಮೂಲ ಸ್ಥಾನ ಹಾಗೂ ದೇವಸ್ಥಾನಗಳಲ್ಲಿ ಆಚರಣೆಯಾದರೇ ನಾಗರ ಪಂಚಮಿ ಹಬ್ಬವೆನ್ನುವುದು ಪ್ರಸಿದ್ಧ ದೇವಸ್ಥಾನಗಳನ್ನೊಳಗೊಂಡಂತೆ ವಿವಿಧ ನಾಗ ಬನಗಳಲ್ಲಿಯೂ ಆಚರಿಸಲ್ಪಡುತ್ತದೆ. ಅಂತೆಯೇ ಕುಂದಾಪುರದಲ್ಲಿ ನಡೆದ ನಾಗರ ಪಂಚಮಿಯ ವಿಶೇಷ ಇಲ್ಲಿದೆ ನೋಡಿ.
ಕರಾವಳಿಯ ಬಹುದೊಡ್ಡ ಹಬ್ಬವಾದ ನಾಗರ ಪಂಚಮಿಯನ್ನು ಕುಂದಾಪುರ ತಾಲೂಕಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗಿನಿಂದಲೇ ನಾಗಬನ ಹಾಗೂ ನಾಗ ದೇವಸ್ಥಾನಗಳಿಗೆ ಆಗಮಿನಿಸಿದ ಭಕ್ತರು ನಾಗನಿಗೆ ಹಾಲು, ಎಳನೀರು ಕೇದಗೆ ಹೂವನ್ನು ಸಮರ್ಪಿಸಿ ಪುನೀತರಾದರು.
ಕುಂದಾಪುರ ತಾಲೂಕಿನ ಪ್ರಸಿದ್ದ ದೇವಸ್ಥಾನಗಳಾದ ಗುಡ್ಡಮ್ಮಾಡಿ, ಕಾಸನ್ಮಕ್ಕಿ, ತೆಕ್ಕಟ್ಟೆ, ಕೋಟೇಶ್ವರ, ಕಾಳಾವರದಲ್ಲಿ ನಾಗ ದೇವರಿಗೆ ವಿಶೇಷ ಪೂಜಾವಿಧಿಗಳು ನಡೆದವು. ಹೆಮ್ಮಾಡಿ, ತಲ್ಲೂರು, ಕುಂದಾಪುರ ಮುಂತಾದ ನಾಗ ಬನಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ನಾಗರಪಂಚಮಿ ಸಲುವಾಗಿ ಪೂಜಾ-ಕೈಂಕರ್ಯಗಳು ನಡೆದವು.
ಭಕ್ತರು ಶ್ರದ್ಧಾ-ಭಕ್ತಿಯಿಂದ ನಾಗನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ತನು ಸಮರ್ಪಿಸಿದ್ದು, ತೆಕ್ಕಟ್ಟೆಯ ಸುಬ್ರಮಣ್ಯ ದೇವಸ್ಥಾನ, ಕಾಳಾವರ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಎದುರಿನ ನಾಗಬನ, ಕುಂಭಾಶಿ ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮೀ ದೇವಳದದ ಆವರಣದಲ್ಲಿರುವ ನಾಗಬನ ಸೇರಿದಂತೆ ಹಲವು ದೇವಾಲಯಗಳಿಗೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಇನ್ನು ಭಕ್ತರು ಮನೆ ಸಮೀಪದ ಹಾಗೂ ತಾವು ನಂಬಿಕೊಂಡು ಬಂದ ನಾಗಬನಗಳಿಗೆ ತೆರಳಿ ತನು ಸಮರ್ಪಿಸಿದರು.
ನಾಗರ ಪಂಚಮಿಯ ದಿನದಂದು ನಾಗನ ಕಲ್ಲು ತೊಳೆಯಲು ಮಳೆ ಬರುತ್ತದೆ ಎನ್ನುವುದು ನಂಬಿಕೆ. ಅಂತೆಯೇ ತಾಲೂಕಿನಾದ್ಯಂತ ಸೋಮವಾರ ಎಡೆಬಡದೆ ಮಳೆ ಸುರಿಯುತ್ತಿದ್ದರೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಗ ದೇವರಿಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ.