ಆಗುಂಬೆ ಘಾಟಿ: ಸೆ.15ರವರೆಗೆ ಭಾರೀ ವಾಹನಗಳ ಸಂಚಾರ ನಿಷೇಧ.

ಆಗುಂಬೆ: ನಿರಂತರ ಮಳೆಯ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಸೆ.15ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ.

ಆಗುಂಬೆ ಘಾಟಿಯಲ್ಲಿ ಮಳೆಗಾಲದ ಅವಧಿಯಲ್ಲಿ ಭೂಕುಸಿತವಾಗುವ ಸಂಭವ ಇರುವುದರಿಂದ ಜೂ.27ರಿಂದ ಸೆ.15ರವರೆಗೆ ಭಾರೀ ವಾಹನ ಸಂಚರಿಸದಂತೆ ಆದೇಶಿಸಲಾಗಿದೆ.

ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ -ಮಾಸ್ತಿಕಟ್ಟೆ- ಸಿದ್ದಾಪುರ-ಕುಂದಾಪುರ ಮೂಲಕ ಉಡುಪಿ ತಲುಪಬಹುದು. ಉಡುಪಿಯಿಂದ ತೀರ್ಥಹಳ್ಳಿ ಬರುವವರು ಉಡುಪಿ- ಕುಂದಾಪುರ- ಸಿದ್ದಾಪುರ- ಮಾಸ್ತಿಕಟ್ಟೆ ಮೂಲಕ ತೀರ್ಥಹಳ್ಳಿಗೆ ಸಂಚರಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.