ಉಡುಪಿ: ಜನಸ್ಪಂದನ ಕಾರ್ಯಕ್ರಮದಲ್ಲಿ ನೀಡಿರುವ ಅಹವಾಲುಗಳನ್ನು ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಶೀಘ್ರದಲ್ಲಿಯೇ ಸ್ಪಂದಿಸಿ, ಸಮಸ್ಯೆಗಳನ್ನು ನಿಯಮಾನುಸಾರ ಬಗೆಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಮಂಗಳವಾರ ಕುಂದಾಪುರ ಶಾಸ್ರೀ ಸರ್ಕಲ್ ಬಳಿಯ ಆರ್.ಎನ್.ಶೆಟ್ಟಿ ಸಭಾಭವನ (ಬಂಟರ ಯಾನೆ ನಾಡವರ ಸಂಕೀರ್ಣ) ದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜನಸ್ಪಂದನ ಕಾರ್ಯಕ್ರಮವನ್ನು ಕಳೆದ ವರ್ಷದಿಂದಲೇ ಆರಂಭಿಸಲಾಗಿದ್ದು, ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಯೋಜಿಸುವುದರೊಂದಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಜನರು ಸಲ್ಲಿಸಿದ ಅರ್ಜಿಗಳಿಗೆ ಅಲ್ಪಕಾಲದಲ್ಲಿಯೇ ಪರಿಹಾರ ಒದಗಿಸಲಾಗುವುದು. ಅಲ್ಲದೇ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್ಲೈನ್ ಮೂಲಕ ಪರಿಶೀಲಿಸಲು ಅನುಕೂಲವಾಗುವಂತೆ ಐ.ಪಿ.ಜಿ.ಆರ್.ಎಸ್ ನಲ್ಲಿ ಅಪ್ಲೋಡ್ ಮಾಡಲಾಗುವುದು. ಇದರಿಂದ ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದರ ಜೊತೆಗೆ ಆನ್ಲೈನ್ ಮೂಲಕ ಪರಿಶೀಲಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಸಾರ್ವಜನಿಕರು ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಜನಸ್ಪಂದನ ಸಭೆಯಲ್ಲಿ ಬಂದಂತಹ ಅರ್ಜಿಗಳಲ್ಲಿ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಬಗೆಹರಿಸುವಂತಿದ್ದಲ್ಲಿ ಕೂಡಲೇ ಅವುಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲವೊಮ್ಮೆ ದೊಡ್ಡ ಸಮಸ್ಯೆಗಳಿದ್ದಲ್ಲಿ ಅಥವಾ ಸರ್ಕಾರದ ಅನುದಾನದ ಅವಶ್ಯಕತೆ ಇದ್ದಲ್ಲಿ ಅಂತಹವುಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಕಳುಹಿಸಿಕೊಡಲಾಗುವುದು ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಜನಸ್ಪಂದನ ಕಾರ್ಯಕ್ರಮ ಆಯೋಜಿಸುವ ಕುರಿತು ಹೆಚ್ಚಿನ ಪ್ರಚಾರ ಕೈಗೊಂಡಲ್ಲಿ ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅನುಕೂಲ ವಾಗುತ್ತದೆ. ಜನಸ್ಪಂದನ ಕಾರ್ಯಕ್ರಮವನ್ನು ಆಗಿಂದಾಗ್ಗೆ ತಾಲೂಕು ಮಟ್ಟದಲ್ಲಿ ಕೈಗೊಳ್ಳಬೇಕು. ಇದರ ಜೊತೆಗೆ ಇಲಾಖೆಗಳಲ್ಲಿ ನಿತ್ಯ ಸಾರ್ವಜನಿಕರ ಕೆಲಸವನ್ನು ಸುಗಮವಾಗಿ ಆಗುವ ರೀತಿಯಲ್ಲಿ ಆಗಬೇಕು ಎಂದ ಅವರು, ಕೆಲವೊಮ್ಮೆ ಪಹಣಿ ಬದಲಾವಣೆಗೆ ವರ್ಷಗಟ್ಟಲೇ ಕಾಯುವಂತಹ ಪರಿಸ್ಥಿತಿ ಇದೆ. ಅವುಗಳು ಕಾಲಮಿತಿಯೊಳಗೆ ಆಗಬೇಕು ಎಂದರು.
ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಲು ಸರಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸುವುದರೊಂದಿಗೆ ಆಡಳಿತವನ್ನು ಜನರ ಹತ್ತಿರ ಕರೆದೊಯ್ಯುವಂತದ್ದಾಗಿದೆ. ಜನರು ಸಹ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಉತ್ಸಾಹದಿಂದ ಬಂದಿರುತ್ತಾರೆ. ಅಧಿಕಾರಿಗಳು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತಂದರು. ವಿದ್ಯುತ್ ಸಮಸ್ಯೆ, ಜಮೀನಿನ ಅಳತೆ ವಿಳಂಬ, ರಸ್ತೆ ಸಮಸ್ಯೆ, ಮಳೆಯ ನೀರು ಸರಿಯಾಗಿ ಹರಿದು ಹೋಗದಿರುವ ಬಗ್ಗೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಸುಮಾರು 69 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಾಳವಾರ ಗ್ರಾಮದ ಸ.ನಂ.2 ರ ವಿ.ಸ ನಂ.33 ರ ಕೃಷಿ ಭೂಮಿಗೆ ಪಕ್ಕದ ಕೃಷಿ ಭೂಮಿ ಮಾಲೀಕರು ಮಣ್ಣನ್ನು ತಂದು ಹಾಕಿರುವ ಹಿನ್ನೆಲೆ ಮಳೆಯ ನೀರು ಸರಾಗವಾಗಿ ಹರಿದು ಹೋಗದೇ ನನ್ನ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಅಡ್ಡಿಯಾಗಿದೆ. ನೀರು ಹರಿಯಲು ಮಾರ್ಗವಿಲ್ಲದೇ ಕೃತಕ ನೆರೆ ಉಂಟಾಗಿದೆ ಎಂದು ಕಾಳಾವಾರದ ಸುಬ್ರಹ್ಮಣ್ಯ ಎಂಬುವವರ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ, ಅದಕ್ಕೆ ಸ್ಪಂದಿಸಿ, ತಹಶೀಲ್ದಾರಗಳು ಸ್ಥಳ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು. ಕುಂದಾಪುರದ ವಿಠ್ಠಲವಾಡಿ ನರ್ಸಿಬೆಟ್ಟುವಿನ ರಾಘವೇಂದ್ರ S/o ಮಂಜುನಾಥ ಪೂಜಾರಿ ಎಂಬುವವರು ನಾನು ಅಂಗವಿಕಲನಾಗಿದ್ದು, ಬಿ.ಎ ಪದವಿಯಲ್ಲಿ ಶೇ. 72 ಅಂಕವನ್ನು ಪಡೆದಿರುತ್ತೇನೆ. ನನ್ನ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಸ್ಥಳೀಯ ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ನೀಡುವಂತೆ ಕೋರಿ ನೀಡಿದ ಅರ್ಜಿಗೆ ಜಿಲ್ಲಾಧಿಕಾರಿಗಳು, ಸರ್ಕಾರಿ ನೇಮಕಾತಿಯಲ್ಲಿ ಶೇ. 5 ರಷ್ಟು ವಿಕಲಚೇತನರಿಗೆ ಮೀಸಲಿರುತ್ತದೆ. ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಸಹಾಯಕ ಕಮೀಷನರ್ ರಶ್ಮಿ, ತಹಶೀಲ್ದಾರ್ ಶೋಭಾ ಲಕ್ಷ್ಮಿ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.