ಡಿ.27ರಂದು 9ನೇ ವರ್ಷದ ‘ಮಂಗಳೂರು ಕಂಬಳ’

                                                                                                                                                                                    ಮಂಗಳೂರು: ಬಂಗ್ರಕೂಳೂರಿನ ಗೋಲ್ಡ್ ಪಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಡಿ.27ರಂದು 9ನೇ ವರ್ಷದ 'ಮಂಗಳೂರು ಕಂಬಳ' ನವ-ವಿಧ ಕಾರ್ಯಕ್ರಮಗಳೊಂದಿಗೆ ವೈಶಿಷ್ಟ್ಯ ಪೂರ್ಣವಾಗಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಕಂಬಳವು ಕರಾವಳಿಯ ಸಂಸ್ಕೃತಿಯ ವೈಶಿಷ್ಟ್ಯದ ಪ್ರತೀಕ. ಕಂಬಳದ ಅಸ್ಮಿತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆದಾಗ ಅದರ ವಿರುದ್ಧ ಸಿಡಿದೆದ್ದು ಆರಂಭವಾದ ಸಣ್ಣ ಪ್ರಯತ್ನವೇ ಮಂಗಳೂರು ಕಂಬಳವಾಗಿ 9 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಬೆಳಗ್ಗೆ 8.30 ಕ್ಕೆ ಉದ್ಘಾಟನೆ ನೆರವೇರಲಿದ್ದು, ಸಂಜೆ 6ಕ್ಕೆ ಸಭಾ ಕಾರ್ಯಕ್ರಮವಿದೆ ಎಂದರು.

ಎಂ.ಆರ್‌.ಜಿ. ಗ್ರೂಪ್‌ನ ಸಿಎಂಡಿ ಹಾಗೂ ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ|ಕೆ. ಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆ ವಹಿಸುವರು.ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಶಾಸಕರು, ಸಂಸದರು, ವಿವಿಧ ಕ್ಷೇತ್ರದ ಮುಖಂಡರು ಭಾಗವಹಿಸುವರು. ಈ ಬಾರಿ160 ರಿಂದ 170 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಈ ಬಾರಿಯದ್ದು ನವ ವರ್ಷ -ನವವಿಧ ಪರಿಕಲ್ಪನೆ. ಐದು ಚಟುವಟಿಕೆ ಹಾಗೂ ನಾಲ್ಕು ಸ್ಪರ್ಧೆಗಳಿರಲಿವೆ ಎಂದ ಅವರು, 24 ಗಂಟೆಯೊಳಗೆ ಕಂಬಳ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದರು.

ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್‌ ಕುಮಾರ್‌ಶೆಟ್ಟಿ, ವಿಜಯ್‌ ಕುಮಾರ್‌ ಕೆಂಗಿನಮನೆ, ಉಪಾಧ್ಯಕ್ಷರಾದ ಕಿರಣ್‌ ಕುಮಾರ್‌ಕೋಡಿಕಲ್‌, ಸಂಜಯ್‌ ಪ್ರಭು, ಜೋಯಲೆಸ್‌ ಡಿ’ಸೋಜಾ, ವಸಂತ್‌ ಜೆ.ಪೂಜಾರಿ, ನಂದನ್‌ ಮಲ್ಯ, ಅಜಿತ್‌ ಬೋಪಯ್ಯ, ಗುರುಚಂದ್ರ ಹೆಗಡೆ, ಅಭಿಷೇಕ್‌ ರೈ, ಈಶ್ವರ್‌ಪ್ರಸಾದ್‌, ಸಾಕ್ಷತ್‌ ಶೆಟ್ಟಿ, ಪ್ರಕಾಶ್‌ ಗರೋಡಿ, ಸಂಚಾಲಕರಾದ ಸಂತ್ಯಾಗುತ್ತು ಸಚಿನ್‌ ಶೆಟ್ಟಿ, ಕಾರ್ಯದರ್ಶಿ ಅವಿನಾಶ್‌ ಸುವರ್ಣ, ಸುಜಿತ್‌ ಪ್ರತಾಪ್‌ ಮಂಗಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ನವ ವರ್ಷ – ನವ ವಿಧ ಪರಿಕಲ್ಪನೆ -ವೀರ ವನಿತೆ ರಾಣಿ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ ಪ್ರಯುಕ್ತ ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠದ ಸಹಯೋಗದೊಂದಿಗೆ “ರಾಣಿ ಅಬ್ಬಕ್ಕ ಚರಿತ್ರಾ ಚಿತ್ರಕಲಾ ಪ್ರದರ್ಶನ’ ನಡೆಯಲಿದ್ದು, ವಂದೇ ಮಾತರಂ ಗೀತೆಗೆ 150ನೇ ವರ್ಷದ ಸವಿನೆನಪಿಗೆ ಉದ್ಘಾಟನೆ ವೇಳೆ 150 ವಿದ್ಯಾರ್ಥಿನಿಯರಿಂದ ವಂದೇ ಮಾತರಂ ಸಮೂಹ ಗಾಯನ ನಡೆಯಲಿದೆ.

ಪ್ರಧಾನಿ ಮೋದಿಯವರ ಪರಿಸರ ಸಂರಕ್ಷಣೆಯ ಪರಿಕಲ್ಪನೆಯಂತೆ ಗಿಡಗಳ ವಿತರಣೆ. ದೇಶ- ವಿದೇಶದಲ್ಲಿ ಯಶಸ್ವಿಯಾದ ಮಂಗಳೂರಿಗರು “ಬ್ಯಾಕ್‌ ಟು ಊರು’ ಎನ್ನುವ ಆಲೋಚನೆಯಡಿ ಊರಿಗೆ ವಾಪಸ್ಸಾಗಿ ಉದ್ಯಮ ಸ್ಥಾಪಿಸಿದ 9 ಮಂದಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ.

ವೃದ್ಧಾಶ್ರಮದ ಹಿರಿಯ ಚೇತನಗಳನ್ನು ಬರಮಾಡಿಕೊಂಡು ಕಂಬಳ ವೀಕ್ಷಿಸಲು ಅವಕಾಶ ಮಾಡಲಾಗಿದೆ.

ವಿವಿಧ ಸ್ಪರ್ಧೆಗಳು:

ರಂಗ್‌ದ ಕೂಟ ಹೆಸರಿನಲ್ಲಿ ಬೆಳಗ್ಗೆ ರಂಗ್‌ದ ಕಿನ್ಯ, ರಂಗ್‌ದ ಎಲ್ಯ, ರಂಗ್‌ ದ ಮಲ್ಲ ಹಾಗೂ ರಂಗ್‌ದ ಕೂಟ ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ಹಾಗೂ ಮಂಗಳೂರು ಕಂಬಳ ಫೋಟೋಗ್ರಫಿ ಸ್ಪರ್ಧೆ ನಡೆಯಲಿದೆ.

ಕೃತಕ ಬುದ್ಧಿಮತ್ತೆಯ (ಅಐ) ಬಳಸಿ ಕಂಬಳದ ಕಲಾಕೃತಿ ರಚನಾ ಸ್ಪರ್ಧೆ ಹಾಗೂ ತಾವು ಸಿದ್ಧಪಡಿಸಿದ ರೀಲ್ಸ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅತೀ ಹೆಚ್ಚು ವ್ಯೂವ್ಸ್‌ ಗೆ ಪಡೆದವರಿಗೆ ಬಹುಮಾನ ಕೂಡ ನೀಡಲಾಗುವುದು.