ಬೆಂಗಳೂರು: 2020–21ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ 99.9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬಗ್ಗೆ ಮಾಹಿತಿ ನೀಡಿದರು.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ 8,71,443 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿಗಳು https://sslckarnataka.gov.in ವೆಬ್ಸೈಟ್ನಲ್ಲಿ ಫಲಿತಾಂಶ ನೋಡಬಹುದು.
ಫಲಿತಾಂಶದಲ್ಲಿ ಎ + ಶ್ರೇಣಿಯಲ್ಲಿ 1,28,931 (ಶೇ.16.25) ವಿದ್ಯಾರ್ಥಿಗಳು, ಎ ಶ್ರೇಣಿಯಲ್ಲಿ 2,50,317(ಶೇ 32)ವಿದ್ಯಾರ್ಥಿಗಳು, ಬಿ ಶ್ರೇಣಿಯಲ್ಲಿ 2,87,684(ಶೇ.36.86) ವಿದ್ಯಾರ್ಥಿಗಳು, ಸಿ ಶ್ರೇಣಿಯಲ್ಲಿ 1,13,610(ಶೇ.14.55) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
157 ವಿದ್ಯಾರ್ಥಿಗಳು 625ಕ್ಕೆ 625 ಅಂಕವನ್ನು ಪಡೆದಿದ್ದಾರೆ. 625ಕ್ಕೆ 623 ಅಂಕವನ್ನು 289 ವಿದ್ಯಾರ್ಥಿಗಳು ಪಡೆದಿದ್ದಾರೆ. ಶೇ.9 ರಷ್ಟು ಮಕ್ಕಳನ್ನು ಗ್ರೇಸ್ ಮಾರ್ಕ್ ನೀಡಿ ಪಾಸ್ ಮಾಡಲಾಗಿದೆ. 13 ವಿದ್ಯಾರ್ಥಿಗಳಿಗೆ ಗರಿಷ್ಠ 28 ಗ್ರೇಸ್ ಮಾರ್ಕ್ ನೀಡಲಾಗಿದೆ.