ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್‌ನಲ್ಲಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆ ಪ್ರಾರಂಭ

ಉಡುಪಿ: ಕಲ್ಮಾಡಿಯಲ್ಲಿರುವ ಅವರ್ ಲೇಡಿ ವೆಲ್ಲಂಕಣಿ ಮಾತೆಯ ಕೇಂದ್ರವನ್ನು ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವಾಗಿ ಘೋಷಣೆ ಮಾಡುವ ತಯಾರಿಯಲ್ಲಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗಳು ಆಗಸ್ಟ್ 6 ಶನಿವಾರದಂದು ಪ್ರಾರಂಭವಾಯಿತು. ಕಲ್ಯಾಣಪುರದ ಅವರ್ ಲೇಡಿ ಆಫ್ ಮಿರಾಕಲ್ಸ್ ಕ್ಯಾಥೆಡ್ರಲ್‌ನ ರೆ.ಫಾ. ರೆಕ್ಟರ್ ವಲೇರಿಯನ್ ಮೆಂಡೋನ್ಸಾ ಧ್ವಜಾರೋಹಣ ನೆರವೇರಿಸಿ ಮೊದಲ ದಿನದ ನೊವೆನಾ ಪ್ರಾರ್ಥನೆ ನಡೆಸಿದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರು ವಂ. ರೋಯ್ ಲೋಬೊ, ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ, ಚರ್ಚಿನ ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಸಂದೀಪ್ ಅಂದ್ರಾದೆ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೆಲ್ಲಂಕಣಿ ಮಾತೆಯ ಹಬ್ಬ, ವೆಲ್ಲಂಕಣಿ ಮಾತೆಯ ಕೇಂದ್ರವನ್ನು ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವಾಗಿ ಘೋಷಣೆ ಮತ್ತು ಸಮರ್ಪಣೆ ಮತ್ತು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್‌ನ ಸುವರ್ಣ ಮಹೋತ್ಸವ ಆಚರಣೆ ಆಗಸ್ಟ್ 15 ರಂದು ನಡೆಯಲಿದೆ. ಆಗಸ್ಟ್ 14 ರಂದು ಮಧ್ಯಾಹ್ನ 2:45 ಕ್ಕೆ ಆದಿ-ಉಡುಪಿ ಜಂಕ್ಷನ್‌ನಿಂದ ಕಲ್ಮಾಡಿ ಚರ್ಚ್ ವರೆಗೆ ವೆಲ್ಲಂಕಣಿ ಮಾತೆಯ ಮೆರವಣಿಗೆ ನಡೆಯಲಿದ್ದು, ಉಡುಪಿ ಶಾಸಕ ರಘುಪತಿ ಭಟ್ ಮತ್ತು ಕಲ್ಮಾಡಿ ವಾರ್ಡ್ ಸದಸ್ಯ ಸುಂದರ ಕಲ್ಮಾಡಿ ಚಾಲನೆ ನೀಡಲಿದ್ದಾರೆ. ಅಂದು ಸೇಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ರೆ.ಫಾ ರೊನಾಲ್ಡ್ ಸೆರಾವೊ ನೊವೆನಾ ಪ್ರಾರ್ಥನೆಯನ್ನು ನಡೆಸಿಕೊಡುವರು.

ಆಗಸ್ಟ್ 15 ರಂದು ನಡೆಯುವ ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಧರ್ಮಾಧ್ಯಕ್ಷ ವಂ. ಡಾ. ಪೀಟರ್ ಪೌಲ್ ಸಲ್ಡಾನಾ, ಮಂಗಳೂರಿನ ನಿವೃತ ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಶಿವಮೊಗ್ಗ ಧರ್ಮಾಧ್ಯಕ್ಷ ವಂ. ಡಾ. ಫ್ರಾನ್ಸಿಸ್ ಸೆರಾವೊ, ಬಳ್ಳಾರಿ ಧರ್ಮಾಧ್ಯಕ್ಷ ವಂ. ಡಾ. ಹೆನ್ರಿ ಡಿಸೋಜಾ, ಬೆಳ್ತಂಗಡಿ ಧರ್ಮಾಧ್ಯಕ್ಷ ವಂ. ಡಾ. ಲಾರೆನ್ಸ್ ಮುಕ್ಕುಯಿ, ಪುತ್ತೂರಿನ ಧರ್ಮಾಧ್ಯಕ್ಷ ವಂ. ಡಾ. ಗೀವರ್ಗಿಸ್ ಮಕಾರಿಯೋಸ್ ಕಲಾಯಿಲ್ ಭಾಗವಹಿಸಲಿದ್ದಾರೆ.