ಎಂಟು ಮಂಗಗಳಲ್ಲಿ ಕೆಎಫ್ಡಿ ವೈರಸ್ ಪತ್ತೆ, ಆತಂಕ ಬೇಡ: ಜಿಲ್ಲಾಧಿಕಾರಿ

ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಳೆದ ಸುಮಾರು ಹತ್ತು ದಿನಗಳಿಂದ ಮೃತಪಟ್ಟ 25ಕ್ಕೂ ಅಧಿಕ ಮಂಗಗಳಲ್ಲಿ 12 ಮಂಗಗಳ ಪರೀಕ್ಷಾ ವರದಿ ಪುಣೆಯಿಂದ ಬಂದಿದ್ದು, ಇವುಗಳಲ್ಲಿ ಎಂಟು ಮಂಗಗಳಲ್ಲಿ ಕ್ಯಾಸನೂರು ಫಾರೆಸ್ಟ್ ಡೀಸಿಸ್ (ಕೆಎಫ್ಡಿ-ಮಂಗನ ಕಾಯಿಲೆ)ನ ವೈರಸ್ ಪತ್ತೆಯಾಗಿದೆ ಎಂದು ಮಂಗನ ಕಾಯಿಲೆಯ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ಶಿರೂರು, ಸಿದ್ಧಾಪುರ, ಹೊಸಂಗಡಿ, ಬೆಳ್ವೆ (2), ಕಂಡ್ಲೂರು, ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಹೇರೂರು ಹಾಗೂ ಕಾರ್ಕಳ ತಾಲೂಕಿನ ಹಿರ್ಗಾನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಮಂಗಗಳಲ್ಲಿ ಈ ವೈರಸ್ ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಮಂಗಗಳ ದೇಹದಲ್ಲಿ ಮಂಗನ ಕಾಯಿಲೆ ಹರಡುವ ವೈರಸ್ ಇರುವುದು ಖಚಿತವಾಗಿದೆ ವಿವರಿಸಿದರು.
ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಿಂದ ಶಂಕಿತ ಮಂಗನ ಕಾಯಿಲೆಯ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಿದ ರಕ್ತದ ವರದಿ ನೆಗೆಟೀವ್ ಆಗಿ ಬಂದಿದೆ ಎಂದು ತಿಳಿಸಿದರು.
ಆತಂಕ ಬೇಡ: ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಸತ್ತ ಒಟ್ಟು ಮಂಗಗಳಲ್ಲಿ ಎಂಟು ಮಂಗಗಳಿಗೆ- ಕೆಎಫ್ಡಿ ವೈರಸ್ ಇರುವುದು ಪರೀಕ್ಷೆಯಿಂದ ಖಚಿತವಾಗಿದೆ. ಅದೇ ರೀತಿ ಬ್ರಹ್ಮಾವರದಲ್ಲಿ ಜ್ವರದಿಂದ ಬಳಲುತಿದ್ದ ಶಂಕಿತ ರೋಗಿಯೊಬ್ಬರ ಸ್ಯಾಂಪಸ್ ನೆಗೆಟೀವ್ ಆಗಿ ಬಂದಿದೆ. ಜನರು ಈ ಬಗ್ಗೆ ಗಾಬರಿಗೊಳ್ಳದೇ ಜಾಗೃತರಾಗಿ ಇರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಅದರಲ್ಲೂ ಸತ್ತ ಮಂಗಗಳು ಪತ್ತೆಯಾದ ಪ್ರದೇಶದ ಜನರು ಕಾಡಿಗೆ ಹೋಗದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮನವಿ ಮಾಡಿದ್ದಾರೆ.