ಚೆನ್ನೈ: ಕ್ರಿಕೆಟ್ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ಅವರ ಜೀವನಾಧಾರಿತ 800 ಚಿತ್ರ ನಿರ್ಮಾಣ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೀಗ ಚಿತ್ರದಲ್ಲಿ ಮುರಳಿಧರನ್ ಪಾತ್ರದಲ್ಲಿ ನಟಿಸಬೇಕಿದ್ದ ನಟ ವಿಜಯ್ ಸೇತುಪತಿ ಅವರನ್ನು ಚಿತ್ರದಿಂದ ಹೊರನಡೆಯುವಂತೆ ಮುತ್ತಯ್ಯ ಮುರಳಿಧರನ್ ಮನವಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಯೋಪಿಕ್ 800 ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ತಮಿಳುನಾಡಿನಲ್ಲಿ ವಿಜಯ್ ಸೇತುಪತಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಯಿತು. ಹೀಗಾಗಿ ಚಿತ್ರದಿಂದ ಹೊರನಡೆಯುವಂತೆ ಮುತ್ತಯ್ಯ ಮುರಳಿಧರನ್ ಅವರು ವಿಜಯ್ ಸೇತುಪತಿಗೆ ಮನವಿ ಮಾಡಿದ್ದಾರೆ.
ಮುತ್ತಯ್ಯ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಎಂಎಸ್ ಶ್ರೀಪತಿ ನಿರ್ದೇಶನದ 800 ಸಿನಿಮಾದ ಕುರಿತಾಗಿ ತಮಿಳುನಾಡಿನಲ್ಲಿ ಸಾಕಷ್ಟು ವಿವಾದಗಳು ಉಂಟಾಗಿವೆ. ಇದರಿಂದ ವಿಜಯ್ ಸೇತುಪತಿ ಕೂಡ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ತಮಿಳಿನ ಅದ್ಭುತ ನಟರಲ್ಲಿ ಒಬ್ಬರಾದ ವಿಜಯ್ ಸೇತುಪತಿ ವಿವಾದಕ್ಕೆ ಸಿಲುಕಿರುವುದು ನನಗೆ ಇಷ್ಟವಿಲ್ಲ.
ಇದರಿಂದ ವಿಜಯ್ ಅವರ ಮುಂದಿನ ಚಿತ್ರಗಳಿಗೆ ತೊಂದರೆಯಾಗಬಹುದು. ಆ ಭಯದಿಂದಲೇ ನಾನು ಈ ಚಿತ್ರದಿಂದ ಹೊರ ನಡೆಯುವಂತೆ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮುರಳಿಧರನ್ ಅವರ ಟ್ವೀಟ್ ಅನ್ನು ಶೇರ್ ಮಾಡಿರುವ ವಿಜಯ್ ಸೇತುಪತಿ ಅವರು ಥ್ಯಾಂಕ್ ಯು ಅಂಡ್ ಗುಡ್ ಬೈ ಎಂದು ಬರೆದುಕೊಂಡಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಸೇತುಪತಿ ಅವರು ಈ ಚಿತ್ರದಿಂದ ಹಿಂದೆ ಸರಿಯುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಬಗ್ಗೆ ಯಾವುದೆಲ್ಲ ಬೆಳವಣಿಗೆಗಳು ನಡೆಯುತ್ತವೆ ಎಂಬುವುದನ್ನು ಕಾದುನೋಡಬೇಕಿದೆ.