ಸೂರತ್: ಗುಜರಾತ್ನ ಶ್ರೀಮಂತ ವಜ್ರದ ವ್ಯಾಪಾರಿಯ ಎಂಟು ವರ್ಷದ ಮಗಳು ಎಲ್ಲ ಸುಖ ಸೌಕರ್ಯಗಳನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ದೇವಾಂಶಿ ಸಾಂಘ್ವಿ ಅವರು ಇಂದು ಸೂರತ್ನಲ್ಲಿ ವಿದ್ಯುಕ್ತವಾಗಿ ದೀಕ್ಷೆ ತೆಗೆದುಕೊಳ್ಳಲಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಧನೇಶ್ ಸಾಂಘ್ವಿ ಮತ್ತು ಅವರ ಪತ್ನಿ ಅಮಿಯ ಹಿರಿಯ ಮಗಳು ದೇವಾಂಶಿ. ಇವರ ಕುಟುಂಬವು ವಿಶ್ವದ ಅತ್ಯಂತ ಹಳೆಯ ವಜ್ರ ಕಂಪನಿಗಳಲ್ಲಿ ಒಂದಾದ ಸಾಂಘ್ವಿ ಮತ್ತು ಸನ್ಸ್ ಅನ್ನು ನಡೆಸುತ್ತಿದೆ. ಪ್ರಸ್ತುತ ರೂ 100 ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ವಜ್ರವ್ಯಾಪಾರದ ಕುಟುಂಬದಿಂದ ಬಂದಿದ್ದರೂ ದೇವಾಂಶಿ ಇದ್ಯಾವುದರ ಹಂಗು ಬೇಡವೆಂದು ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ.
ಅವರು ದೀಕ್ಷೆ ತೆಗೆದುಕೊಳ್ಳುವ ಒಂದು ದಿನ ಮೊದಲು, ನಗರದಲ್ಲಿ ಒಂಟೆ, ಆನೆ ಕುದುರೆಗಳ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಜೈನ ಸಮುದಾಯದ ಹಲವಾರು ವಜ್ರದ ವ್ಯಾಪಾರಿಗಳಿಗೆ ನೆಲೆಯಾಗಿರುವ ದೇಶವಾದ ಬೆಲ್ಜಿಯಂನಲ್ಲಿಯೂ ಆಕೆಯ ಕುಟುಂಬವು ಈ ಹಿಂದೆ ಇದೇ ರೀತಿಯ ಮೆರವಣಿಗೆಯನ್ನು ಆಯೋಜಿಸಿತ್ತು.
‘ದೀಕ್ಷೆ’ ಅಥವಾ ತ್ಯಾಗದ ಪ್ರತಿಜ್ಞೆಗೆ ಆಯ್ಕೆ ಮಾಡುವ ಮೊದಲು, ದೇವಾಂಶಿ ಸನ್ಯಾಸಿಗಳೊಂದಿಗೆ 600 ಕಿಲೋಮೀಟರ್ಗಳಷ್ಟು ದೂರ ನಡೆದರು ಮತ್ತು ತಪಸ್ವಿಗಳ ಕಷ್ಟಕರ ಜೀವನವನ್ನು ಕಲಿತರು. 367 ದೀಕ್ಷಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ದೇವಾಂಶಿ ತಮ್ಮ ಮುಂದಿನ ಬದುಕನ್ನು ಸನ್ಯಾಸಿನಿಯಾಗಿ ಬದುಕಲಿದ್ದಾರೆ. ಜೈನಾಚಾರ್ಯ ಕೀರ್ತಿಯಶ್ಸೂರಿಸ್ವರ್ಜಿ ಮಹಾರಾಜರು ದೀಕ್ಷೆ ನೀಡಲಿದ್ದಾರೆ.
ದೇವಾಂಶಿ ಇಲ್ಲಿಯವರೆಗೆ ಯಾವುದೇ ಸಿನಿಮಾ ಅಥವಾ ಟಿವಿ ಶೋಗಳನ್ನು ನೋಡಿಲ್ಲ ಅಲ್ಲದೆ ಅವರು ಎಂದಿಗೂ ರೆಸ್ಟೋರೆಂಟ್ಗೆ ಭೇಟಿ ನೀಡಿಲ್ಲ. ಸಂಪೂರ್ಣ ಪರಿವಾರ ದೈವಭಕ್ತ ಕುಟುಂಬವಾಗಿದ್ದು, ದೇವಾಂಶಿ ಚಿಕ್ಕಂದಿನಿಂದಲೇ ಪ್ರಾರ್ಥನಾದಿಗಳಲ್ಲಿ ಮಗ್ನರಾಗಿದ್ದರು ಎಂದು ಕುಟುಂಬದ ಪರಿಚಯಸ್ಥರೊಬ್ಬರು ಹೇಳಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.