ನಮಗೆ ಬಂದ ಸ್ವಾತಂತ್ರ್ಯ ಹಾಗೇ ಸುಮ್ಮನೇ ಬಂದಿದ್ದಲ್ಲ ಅದು ಹಿರಿಯರ ಶ್ರಮ ಮತ್ತು ತ್ಯಾಗದ ಫಲ. ಸ್ವಾತಂತ್ರ ದೊರೆಯಲು ಹಲವಾರು ಹೋರಾಟಗಾರರ ತ್ಯಾಗದ ಫಲವಾಗಿ ಇಂದು ಈ ದಿನವನ್ನು ಸಂಭ್ರಮಿಸುಂತಾಗಿದೆ. ಈ ದಿನ ದೇಶಕ್ಕಾಗಿ ಮಡಿದ ಹುತಾತ್ಮರನ್ನು ನಾವು ಸ್ಮರಿಸುವ ಏಕೈಕ ದಿನ ಮಾತ್ರವಲ್ಲ. ಭಾರತೀಯರ ಸಾಂಸ್ಕೃತಿಕ ವಿಭಿನ್ನತೆಗಳನ್ನು ಮರೆತು ನಿಜವಾದ ಭಾರತೀಯರಾಗಿ ಒಂದಾಗುವ ಕ್ಷಣ ಕೂಡ ಹೌದು.


ದೇಶದ ಮೇಲಿನ ಪ್ರೀತಿಯ ಭಾವನೆ ಜಾಸ್ತಿಯಾಗಲಿ:
ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ದೇಶದ ರಾಷ್ಟ್ರ ಧ್ವಜವನ್ನು ಹಾರಿಸಲು ಮತ್ತು ನಮ್ಮ ರಾಷ್ಟ್ರಗೀತೆಯನ್ನು ಹಾಡುವುದೇ ಒಂದು ರೀತಿಯಾದ ಹೇಳತೀರದ ಖುಷಿಯೋ ಖುಷಿ. ನಮ್ಮಲ್ಲಿ ದೇಶಭಕ್ತಿ ಮತ್ತು ನಮ್ಮ ದೇಶದ ಮೇಲಿನ ಪ್ರೀತಿಯ ಭಾವನೆಯನ್ನು ತುಂಬಲು ಈ ಸ್ವಾತಂತ್ರ್ಯ ದಿನವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದಿನ ಜನತೆಯು ಹೋರಾಟಗಾರರ ತ್ಯಾಗದ ಫಲವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸಿಕ್ಕಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಇತರರ ಸ್ವತಂತ್ರಕ್ಕೆ ತೊಡಕನ್ನು ಉಂಟು ಮಾಡುತ್ತಿದ್ದಾರೆ.


ನಾಳೆಗೆ ಅರಳಲಿ ಸಮೃದ್ಧ ಭಾರತ:
ಸ್ವಾತಂತ್ರಕ್ಕಾಗಿ ಹೋರಾಡಿದ ಹಾಗೂ ಪ್ರಾಣತೆತ್ತ ಎಲ್ಲಾ ದೇಶಭಕ್ತರು ನಮ್ಮ ದೇಶವು ಸ್ವತಂತ್ರದೊಂದಿಗೆ ಶಾಂತಿಯುತವಾಗಿ ಇರಬೇಕೆಂದು ಬಯಸಿದ್ದರು. ಆದರೆ ಕೆಲವೆಡೆ ಭ್ರಷ್ಟಾಚಾರ, ಕೋಮುಗಲಭೆಯಿಂದ ಶಾಂತಿ ಎಂಬುವ ವಾತಾವರಣವಿಲ್ಲವೆಂಬಂತಿದೆ. ನಮ್ಮ ದೇಶದ ಯುವ ನಾಗರಿಕರಿಗೆ ರಾಷ್ಟ್ರವನ್ನು ಬದಲಾಯಿಸುವ ಸಾಮರ್ಥ್ಯವಿದೆ. ಮುಂದಿನ ಭವಿಷ್ಯವು ಯುವ ಪೀಳಿಗೆಯ ಮೇಲೆ ಅವಲಂಬಿತವಾಗಿದೆ.
ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ ಮತ್ತು ದೇಶವನ್ನು ಉತ್ತಮಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಉದ್ದೇಶವೆಂದರೆ ನಮ್ಮ ಯುವ ನಾಗರಿಕರಿಗೆ ದೇಶಪ್ರೇಮವನ್ನು ಜಾಗೃತಗೊಳಿಸುವುದಾಗಿರುತ್ತದೆ.ಈ ಸ್ವಾತಂತ್ರ್ಯ ದಿನ ನಮ್ಮೊಳಗಿನ ದೇಶಪ್ರೇಮವನ್ನು ಮತ್ತಷ್ಟು ಬಡಿಗೆಬ್ಬಿಸಲಿ. ಈ ಸ್ವಾತಂತ್ರ್ಯ ದಿನದಂದು ಹಿರಿಯರ ಶ್ರಮ ತ್ಯಾಗ ಎಲ್ಲವನ್ನೂ ಮತ್ತೆ ಮತ್ತೆ ನೆನಪು ಮಾಡಿಕೊಂಡು ದೇಶದ ತ್ರಿವರ್ಣ ಧ್ವಜಕ್ಕೆ ಭಕ್ತಿಯಿಂದ ನಮಿಸೋಣ ಗೌರವ ಸಲ್ಲಿಸೋಣ
































































