ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತದ ಸುಮಾರು 75,000 ಯುವಕರು ಮತ್ತು ಅವರ ಕುಟುಂಬಗಳಿಗೆ ದೀಪಾವಳಿಯನ್ನು ವಿಶೇಷವಾಗಿಸಿದ್ದು, ಅಕ್ಟೋಬರ್ 22 ರಂದು ಯುವಕರಿಗೆ ಅವರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ಪಟ್ಟಿ ಮಾಡಲಾದ ಯುವಕರಿಗೆ ಪ್ರಧಾನಿ ಮೋದಿ ವರ್ಚುವಲ್ ಕಾರ್ಯಕ್ರಮದ ಮೂಲಕ ನೇಮಕಾತಿ ಪತ್ರವನ್ನು ಹಸ್ತಾಂತರಿಸಲಿದ್ದಾರೆ.
ಪ್ರಧಾನ ಮಂತ್ರಿಗಳ ಕಚೇರಿಯು ಎಲ್ಲಾ ಸಚಿವಾಲಯಗಳಿಗೆ ಆಯಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಪತ್ತೆಹಚ್ಚಲು ಮತ್ತು ನಿಗದಿತ ಸಮಯದಲ್ಲಿ ಭರ್ತಿ ಮಾಡಲು ಹೇಳಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೇಂದ್ರ ಸಚಿವರು ತಮ್ಮ ರಾಜ್ಯದಲ್ಲಿ ಅಥವಾ ಈ ಯುವಕರು ತಂಗುವ ಸ್ಥಳದಲ್ಲಿ ಹಾಜರಿರಬೇಕು ಎಂದು ತಿಳಿಸಲಾಗಿದೆ. ಸುಮಾರು 75 ಸ್ಥಳಗಳನ್ನು ಪಟ್ಟಿ ಮಾಡಲಾಗಿದ್ದು, ಕೇಂದ್ರ ಸಚಿವರು ಮತ್ತು ಸಂಸದರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಜೊತೆಗೆ ಉದ್ಯೋಗ ಪಡೆಯುವವರೂ ಸೇರಿರುತ್ತಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಅವರು ಸಿಬ್ಬಂದಿ ಆಯ್ಕೆ ಆಯೋಗಕ್ಕೆ ವಿವರಗಳು ಮತ್ತು ಅರ್ಹತಾ ಮಾನದಂಡಗಳೊಂದಿಗೆ ಖಾಲಿ ಹುದ್ದೆಗಳನ್ನು ಪಟ್ಟಿ ಮಾಡಲು ಹೇಳಿದ್ದರು ಮತ್ತು ಖಾಲಿ ಹುದ್ದೆಗಳನ್ನು ತುಂಬಿಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಗೃಹ, ರಕ್ಷಣೆ, ರೈಲ್ವೆ, ಕಾರ್ಮಿಕ ಸಚಿವಾಲಯಗಳು ಮತ್ತು ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಪಟ್ಟಿ ಮಾಡಿ, ಅರ್ಹತಾ ಮಾನದಂಡಗಳೊಂದಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಇದೀಗ ಅಕ್ಟೋಬರ್ 22 ರಂದು ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಲಾಗುತ್ತದೆ.